ಜೂಲಾನ್ ಗೋಸ್ವಾಮಿಗೆ ಗೆಲುವಿನ ವಿದಾಯ ಹೇಳಿದ ಭಾರತ ಮಹಿಳಾ ಕ್ರಿಕೆಟ್ ತಂಡ
39 ವರ್ಷದ ವೇಗಿಯ ಕೊನೆಯ ಅಂತರಾಷ್ಟ್ರೀಯ ಪಂದ್ಯ ಇದಾಗಿತ್ತು. ಮಹಿಳಾ ಕ್ರಿಕೆಟ್ ನ ಅಗ್ರಮಾನ್ಯ ವೇಗಿಯಾಗಿದ್ದ ಜೂಲಾನ್ ಗೆ ನಿನ್ನೆ ಭಾವುಕ ವಿದಾಯ ಸಿಕ್ಕಿದೆ. ಪಂದ್ಯಕ್ಕೆ ಮೊದಲು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇಳೆ ನಾಯಕಿ ಹರ್ಮನ್ ಪ್ರೀತ್ ಕೌರ್ ಜೂಲಾನ್ ರನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.
ಜೂಲಾನ್ ಆಡಲು ಮೈದಾನಕ್ಕಿಳಿದಾಗ ಇಂಗ್ಲೆಂಡ್ ಆಟಗಾರರು ಗಾರ್ಡ್ ಆಫ್ ಆನರ್ ನೀಡಿದರು. ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 45.4 ಓವರ್ ಗಳಲ್ಲಿ 169 ರನ್ ಗೆ ಆಲೌಟ್ ಆಗಿತ್ತು. ಬಳಿಕ ಇಂಗ್ಲೆಂಡ್ 43.3 ಓವರ್ ಗಳಲ್ಲಿ 153 ರನ್ ಗೆ ಆಲೌಟ್ ಆಯಿತು. ಕೊನೆಯ ವಿಕೆಟ್ ನ್ನು ಬೌಲರ್ ದೀಪ್ತಿ ಶರ್ಮಾ ಮಂಕಡ್ ಔಟ್ ಮಾಡಿದ್ದು ವಿಶೇಷವಾಗಿತ್ತು. ಇದರೊಂದಿಗೆ ಭಾರತ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತು.