ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ ಶತಕದ ನಿರೀಕ್ಷೆಯಲ್ಲಿದ್ದಾರೆ.
ನಿನ್ನೆಯ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿತ್ತು. ರವೀಂದ್ರ ಜಡೇಜಾ 81 ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು ಶತಕದ ನಿರೀಕ್ಷೆಯಲ್ಲಿದ್ದಾರೆ.
ವಿಶೇಷವೆಂದರೆ ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ 86 ರನ್ ಗಳಿಗೆ ಔಟಾಗುವ ಮೂಲಕ ಶತಕ ಮಿಸ್ ಮಾಡಿಕೊಂಡರು. ಇದಕ್ಕೆ ಮೊದಲು ಇದೇ ಇನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಕೂಡಾ 80 ರನ್ ಗಳಿಸಿ ಔಟಾಗುವ ಮೂಲಕ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು.
ಜಡೇಜಾಗೆ ಸಾಥ್ ನೀಡುತ್ತಿರುವ ಅಕ್ಸರ್ ಪಟೇಲ್ 35 ರನ್ ಗಳಿಸಿ ಕ್ರೀಸ್ ನಲ್ಲಿದ್ದು, ಅರ್ಧಶತಕದ ನಿರೀಕ್ಷೆಯಲ್ಲಿದ್ದಾರೆ. ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 246 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ ನಿನ್ನೆಯ ದಿನದಂತ್ಯಕ್ಕೆ 421 ರನ್ ಗಳಿಸಿದ್ದು, 175 ರನ್ ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ಪರ ಮಾರ್ಕ್ ವುಡ್ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದಲ್ಲದೆ ವಿಕೆಟ್ ಕೀಳಲೂ ವಿಫಲರಾದರು. ಟಾಮ್ ಹಾರ್ಟ್ಲೀ, ಜೋ ರೂಟ್ ತಲಾ 2 ವಿಕೆಟ್ ಕಬಳಿಸಿದರು. ಜಾಕ್ ಲೀಚ್, ರೇಹಾನ್ ಅಹ್ಮದ್ ತಲಾ 1 ವಿಕೆಟ್ ಕಬಳಿಸಿದರು. ಇದೀಗ ಭಾರತ ಇಂದು 200 ರನ್ ಗಳ ಮುನ್ನಡೆ ಗಳಿಸಿದರೂ ಮಹತ್ವದ್ದಾಗಲಿದೆ.