ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ತಂಡವಿದೆ.
ಈ ಸರಣಿಯ ಮೊದಲ ಪಂದ್ಯ ಟೈ ಆಗಿತ್ತು. ಎರಡನೇ ಪಂದ್ಯವನ್ನು ಲಂಕಾ ಗೆದ್ದುಕೊಂಡಿತ್ತು. ಈ ಎರಡೂ ಪಂದ್ಯಗಳಲ್ಲಿ ಲಂಕಾ ಮೊದಲು ಬ್ಯಾಟಿಂಗ್ ಮಾಡಿತ್ತು ಎಂಬುದು ಗಮನಿಸಬೇಕಾದ ಅಂಶ. ಇದೀಗ ಮೂರನೇ ಪಂದ್ಯದಲ್ಲಿ ಭಾರತ ಗೆಲ್ಲದೇ ಹೋದರೆ ಸರಣಿ ಕಳೆದುಕೊಳ್ಳಲಿದೆ.
ಈ ಪಂದ್ಯಕ್ಕೆ ರಿಷಬ್ ಪಂತ್ ರನ್ನು ಕರೆತರಲು ಒತ್ತಡವಿದೆ. ಒಂದು ವೇಳೆ ಪಂತ್ ಗೆ ಅವಕಾಶ ನೀಡುವುದಿದ್ದರೆ ಕೆಎಲ್ ರಾಹುಲ್ ಬೆಂಚ್ ಕಾಯಿಸಬೇಕಾದೀತು. ಅಥವಾ ಹೇಳಿಕೊಳ್ಳುವಂತಹ ರನ್ ಗಳಿಸದೇ ಇರುವ ಶುಬ್ಮನ್ ಗಿಲ್ ರನ್ನು ಹೊರಗಿಟ್ಟು ರಾಹುಲ್ ರನ್ನು ಆರಂಭಿಕರಾಗಿ ಆಡಿಸಬೇಕಾದೀತು. ಉಳಿದಂತೆ ಬ್ಯಾಟಿಂಗ್ ನಲ್ಲಿ ಯಾವುದೇ ಬದಲಾವಣೆಯಿರದು.
ಬೌಲಿಂಗ್ ನಲ್ಲಿ ವಾಷಿಂಗ್ಟನ್ ಸುಂದರ್ ಕಳೆದ ಎರಡೂ ಪಂದ್ಯಗಳಲ್ಲಿ ಮಿಂಚಿದ್ದಾರೆ. ಅವರಿಗೆ ಅಕ್ಸರ್ ಪಟೇಲ್, ಕುಲದೀಪ್ ಕೂಡಾ ಸಾಥ್ ನೀಡುತ್ತಿದ್ದಾರೆ. ಬೌಲಿಂಗ್ ಬಗ್ಗೆ ಕಳೆದ ಎರಡೂ ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾಗೆ ತೃಪ್ತಿಯಿರಬಹುದು. ಆದರೆ ಬ್ಯಾಟಿಗರು ಅದರಲ್ಲೂ ಅಗ್ರ ಬ್ಯಾಟಿಗರಾದ ಕೊಹ್ಲಿ, ಗಿಲ್, ಶ್ರೇಯಸ್, ರಾಹುಲ್ ಖ್ಯಾತಿಗೆ ತಕ್ಕ ಆಟವಾಡಬೇಕಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿದ್ದ ಲಂಕಾ ರನ್ ಚೇಸ್ ಅವಕಾಶ ಸಿಕ್ಕರೆ ಹೇಗೆ ಆಡಬಹುದು ಎಂಬ ಕುತೂಹಲವಿದೆ. ಈ ಪಂದ್ಯ ಅಪರಾಹ್ನ 2.30 ಕ್ಕೆ ಆರಂಭವಾಗಲಿದೆ.