ಐಪಿಎಲ್ 2024: ಕುಸಿದ ಆರ್ ಸಿಬಿಗೆ ಚೇತರಿಕೆ ಕೊಟ್ಟ ಅನೂಜ್ ರಾವತ್, ದಿನೇಶ್ ಕಾರ್ತಿಕ್

Krishnaveni K

ಶುಕ್ರವಾರ, 22 ಮಾರ್ಚ್ 2024 (21:47 IST)
ಚೆನ್ನೈ: ಐಪಿಎಲ್ 2024 ಕ್ಕೆ ಇಂದು ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿದೆ.

ಆರ್ ಸಿಬಿ ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಘಟಾನುಘಟಿ ಬ್ಯಾಟಿಗರು ಕೈ ಕೊಟ್ಟು ಪೆವಿಲಿಯನ್ ಸೇರಿಕೊಂಡಾಗ ತಂಡದ ಕೈ ಹಿಡಿದಿದ್ದು ಅನೂಜ್ ರಾವತ್ ಮತ್ತು ದಿನೇಶ್ ಕಾರ್ತಿಕ್. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 20 ಎಸೆತಗಳಿಂದ 21 ರನ್ ಗಳಿಸಿದರೆ ಫಾ ಡು ಪ್ಲೆಸಿಸ್ 23 ಎಸೆತಗಳಿಂದ 35 ರನ್ ಗಳಿಸಿ ಔಟಾದರು. ಫಾ ಡು ಪ್ಲೆಸಿಸ್ ಬೆನ್ನಲ್ಲೇ ರಜತ್ ಪಟಿದಾರ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಬೆನ್ನು ಬೆನ್ನಿಗೇ ಕಳೆದುಕೊಂಡಾಗ ಆರ್ ಸಿಬಿ ಆಘಾತಕ್ಕೀಡಾಯಿತು.

ವಿಪರ್ಯಾಸವೆಂದರೆ ಇತ್ತೀಚೆಗೆ ಇಂಗ್ಲೆಂಡ್ ಸರಣಿಯಲ್ಲಿ ಸತತ ಸೊನ್ನೆ ಸುತ್ತಿದ್ದ ರಜತ್ ಪಾಟೀದಾರ್ ಇಲ್ಲೂ ಅದೇ ಫಾರ್ಮ್ ಮುಂದುವರಿಸಿದರು. 3 ಎಸೆತ ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದರೆ ಅವರ ಹಿಂದೆಯೇ ಗ್ಲೆನ್ ಮ್ಯಾಕ್ಸ್ ವೆಲ್ ಕೂಡಾ ಎದುರಿಸಿದ ಮೊದಲ ಎಸೆತದಲ್ಲೇ ಕೀಪರ್ ಧೋನಿಗೆ ಕ್ಯಾಚಿತ್ತು ನಿರ್ಗಮಿಸಿದರು.

ಆದರೆ ಈ ಹಂತದಲ್ಲಿ ತಂಡದ ಕೈ ಹಿಡಿದಿದ್ದು ಅನೂಜ್ ರಾವತ್. ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸಿದ ಅನೂಜ್ ರಾವತ್ ಒಟ್ಟು 25 ಎಸೆತ ಎದುರಿಸಿ 48 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ಕೊನೆಯ ಐಪಿಎಲ್ ಆಡುತ್ತಿರುವ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ 26 ಎಸೆತಗಳಿಂದ 38 ರನ್ ಗಳಿಸಿ ಅಜೇಯರಾಗುಳಿದರು. ಒಂದು ವೇಳೆ ಇವರಿಬ್ಬರೂ ಆಡದೇ ಇದ್ದಿದ್ದರೆ ತಂಡ 120 ತಲುಪುವುದೂ ಕಷ್ಟವಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಮುಸ್ತಾಫಿಝುರ್ ರೆಹಮಾನ್ 4 ವಿಕೆಟ್ ಕಬಳಿಸಿದರೆ ಉಳಿದೊಂದು ವಿಕೆಟ್ ದೀಪಕ್ ಚಹರ್ ಪಾಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ