ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿ 6 ವಿಕೆಟ್ ಗಳಿಂದ ಸೋತ ಗುಜರಾತ್ ಟೈಟನ್ಸ್ ತವರಿನಲ್ಲೇ ಮುಖಭಂಗ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ 17.3 ಓವರ್ ಗಳಲ್ಲಿ ಕೇವಲ 89 ರನ್ ಗಳಿಗೆ ಆಲೌಟ್ ಆಯಿತು. ಶುಬ್ಮನ್ ಗಿಲ್ 12, ರಾಹುಲ್ ತೆವಾತಿಯಾ 10 ಮತ್ತು ಕೆಳ ಕ್ರಮಾಂಕದಲ್ಲಿ ರಶೀದ್ ಖಾನ್ 31 ರನ್ ಗಳಿಸಿದರು. ಉಳಿದೆಲ್ಲಾ ಬ್ಯಾಟಿಗರದ್ದು ಏಕಂಕಿ ಸಾಧನೆ.
ಡೆಲ್ಲಿ ಪರ ನಾಯಕ ರಿಷಬ್ ಪಂತ್ ಅದ್ಭುತ ಕೀಪಿಂಗ್ ನಡೆಸಿದರು. ವಿಕೆಟ್ ಹಿಂದೆ ಅವರು ಒಟ್ಟು ನಾಲ್ಕು ಬಲಿ ಪಡೆದರು. ಬೌಲರ್ ಗಳ ಪೈಕಿ ಮುಕೇಶ್ ಕುಮಾರ್ 3, ಇಶಾಂತ್ ಶರ್ಮಾ, ತ್ರಿಸ್ಥಾನ್ ಸ್ಟಬ್ಸ್ ತಲಾ 2 ವಿಕೆಟ್, ಖಲೀಲ್ ಅಹಮ್ಮದ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಇದರೊಂದಿಗೆ ಗುಜರಾತ್ ಕನಿಷ್ಠ ಮೊತ್ತಕ್ಕೆ ಆಲೌಟ್ ಆಯಿತು.
ಈ ಮೊತ್ತ ಬೆನ್ನತ್ತಿದ ಡೆಲ್ಲಿ ಕೇವಲ 8.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 92 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು. ಡೆಲ್ಲಿಯದ್ದೂ ಆರಂಭ ಉತ್ತಮವಾಗಿರಲಿಲ್ಲ. ಆದರೆ ಕೊನೆಗೆ ನಾಯಕ ರಿಷಬ್ ಪಂತ್ 11 ಎಸೆತಗಳಿಂದ ಅಜೇಯ 16 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇದರೊಂದಿಗೆ ಡೆಲ್ಲಿ ಉತ್ತಮ ನೆಟ್ ರನ್ ರೇಟ್ ಪಡೆಯಿತು. ಅತ್ತ ಗುಜರಾತ್ ಗೆ ಡೆಲ್ಲಿಯ ನಾಲ್ಕು ವಿಕೆಟ್ ಕಬಳಿಸಿದ್ದಷ್ಟೇ ಲಾಭವಾಯಿತು.