ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಇಂದು ಆರ್ ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದಕ್ಕೆ ಮೊದಲು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದೊಡ್ಡ ದಾಖಲೆ ಮಾಡುವ ಹೊಸ್ತಿಲಲ್ಲಿದ್ದಾರೆ. ಒಂದು ವೇಳೆ ಕೊಹ್ಲಿ ಈ ದಾಖಲೆ ಮಾಡಿದರೆ ಆರ್ ಸಿಬಿಯೂ ಕಪ್ ಗೆಲ್ಲಬಹುದು.
ವಿರಾಟ್ ಕೊಹ್ಲಿ ಈ ಐಪಿಎಲ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದು ರನ್ ಹೊಳೆ ಹರಿಸಿದ್ದಾರೆ. ಇದೀಗ ಲೀಗ್ ಹಂತ ಮುಕ್ತಾಯವಾದ ಬಳಿಕ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿರುವ ವಿರಾಟ್ ಕೊಹ್ಲಿ ಇದೀಗ ನಿರ್ಣಾಯಕ ಘಟ್ಟದಲ್ಲಿ ಅದೇ ಫಾರ್ಮ್ ಮುಂದುವರಿಸಬೇಕಾಗಿದೆ.
ಸದ್ಯಕ್ಕೆ ಕೊಹ್ಲಿ 14 ಪಂದ್ಯಗಳಿಂದ ಈ ಸೀಸನ್ ನಲ್ಲಿ 708 ರನ್ ಗಳಿಸಿದ್ದಾರೆ. ಇನ್ನುಳಿದ ಪಂದ್ಯಗಳಿಂದ ಕೊಹ್ಲಿ 265 ರನ್ ಗಳಿಸಿದರೆ ಒಂದೇ ಸೀಸನ್ ನಲ್ಲಿ ಅತ್ಯಧಿಕ ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಕೊಹ್ಲಿ ಅಳಿಸಿ ಹೊಸದಾಗಿ ದಾಖಲೆ ಬರೆಯಲಿದ್ದಾರೆ. 2016 ರ ಐಪಿಎಲ್ ನಲ್ಲಿ ಕೊಹ್ಲಿ 4 ಶತಕ, 7 ಅರ್ಧಶತಕಗಳೊಂದಿಗೆ 973 ರನ್ ಗಳಿಸಿದ್ದರು.
ಇದೀಗ ಕೊಹ್ಲಿ ಅದೇ ದಾಖಲೆ ಅಳಿಸಲು ಸಫಲರಾದರೆ ಇತ್ತ ಆರ್ ಸಿಬಿ ಕೂಡಾ ಕಪ್ ಗೆಲ್ಲುವುದು ಖಚಿತ. ಕೊಹ್ಲಿ ಸಿಡಿದು ನಿಂತರೆ ಆರ್ ಸಿಬಿಗೆ ಗೆಲುವು ಗ್ಯಾರಂಟಿ. ಹೀಗಾಗಿ ವಿರಾಟ್ ಕೊಹ್ಲಿ ದಾಖಲೆ ಜೊತೆಗೆ ತಂಡಕ್ಕೆ ಕಪ್ ಗೆಲ್ಲಿಸಿಕೊಡಲಿ ಎಂಬುದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.