ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವೀ ನಾಯಕರಾಗಿದ್ದ, ಸ್ಟಾರ್ ಆಟಗಾರ ಧೋನಿಗೆ ಇದೇ ಕೊನೆಯ ಐಪಿಎಲ್ ಆಗಿದ್ದಿರಬಹುದು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಧೋನಿ ತಮ್ಮ ನಿವೃತ್ತಿ ಬಗ್ಗೆ ಏನೂ ಸುಳಿವುಬಿಟ್ಟುಕೊಟ್ಟಿಲ್ಲ. ಚೆನ್ನೈ ಮ್ಯಾನೇಜ್ ಮೆಂಟ್ ಬಳಿ ಅವರು ತಮ್ಮ ನಿವೃತ್ತಿ ಬಗ್ಗೆ ಈ ರೀತಿ ಹೇಳಿದ್ದಾರಂತೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮೊನ್ನೆ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ ಕೆ ಪರವಾಗಿ ಧೋನಿ ಆಡಿದ್ದರು. ಇದುವೇ ಅವರ ಕೊನೆಯ ಪಂದ್ಯವಾಗಿದ್ದಿರಬಹುದು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ 42 ವರ್ಷದ ಧೋನಿ ಇದುವರೆಗೆ ನಿವೃತ್ತಿ ಬಗ್ಗೆ ಹೇಳಿಕೊಂಡಿಲ್ಲ.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾತ್ರ ಧೋನಿ ಎಷ್ಟು ದಿನ ತಂಡದಲ್ಲಿರಲು ಬಯಸುತ್ತಾರೋ ಅಷ್ಟು ದಿನವೂ ಆಡುತ್ತಿರಲಿ ಎಂಬ ನಿಲುವು ಹೊಂದಿದ್ದಾರೆ. ಅಭಿಮಾನಿಗಳಿಂದ ತಲಾ ಎಂದೇ ಕರೆಯಿಸಿಕೊಳ್ಳುವ ಧೋನಿಗೆ ಚೆನ್ನೈ ಎರಡನೇ ತವರು ಮನೆಯಾಗಿದೆ. ಅವರ ಕೊನೆಯ ಪಂದ್ಯ ಎಂದು ಕೇಳಿದರೇ ಅಭಿಮಾನಿಗಳು ಭಾವುಕರಾಗುತ್ತಾರೆ.
ಇದೀಗ ಧೋನಿ ಸಿಎಸ್ ಕೆ ಮ್ಯಾನೇಜ್ ಮೆಂಟ್ ಬಳಿ ತಮ್ಮ ನಿವೃತ್ತಿ ಬಗ್ಗೆ ಹೇಳಿದ್ದಾರಂತೆ. ಮುಂದಿನ ಎರಡು ತಿಂಗಳು ಕಾದು ನೋಡುತ್ತೇನೆ. ಅದಾದ ಬಳಿಕ ನಿವೃತ್ತಿ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಧೋನಿ ಹೇಳಿರುವುದಾಗಿ ವರದಿಯಾಗಿದೆ. ಸದ್ಯಕ್ಕೆ ಧೋನಿ ಮಂಡಿ, ಮಾಂಸಖಂಡಗಳ ನೋವಿನಿಂದ ಬಳಲುತ್ತಿದ್ದಾರೆ. ಇವೆಲ್ಲದಕ್ಕೂ ಚಿಕಿತ್ಸೆ ಪಡೆದುಕೊಂಡ ಬಳಿಕ ತಮ್ಮ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ. ಹೀಗಾಗಿ ದೇಹ ಸಹಕರಿಸಿದರೆ ಮುಂದಿನ ವರ್ಷವೂ ಧೋನಿ ಐಪಿಎಲ್ ನಲ್ಲಿ ಆಡಿದರೂ ಅಚ್ಚರಿಯಿಲ್ಲ!