ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಇಂದು ಮೊದಲ ಪ್ಲೇ ಆಫ್ ಪಂದ್ಯ ನಡೆಯಲಿದ್ದು ಸನ್ ರೈಸರ್ಸ್ ಹೈದರಾಬಾದ್ ಮತ್‍ತು ಕೋಲ್ಕೊತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ. ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
ಹೈದರಾಬಾದ್ ಮತ್ತು ಕೆಕೆಆರ್ ಎರಡೂ ತಂಡಗಳೂ ಲೀಗ್ ಹಂತದಲ್ಲಿ ತಮ್ಮದೇ ಶೈಲಿಯ ಹೊಡೆಬಡಿಯ ಆಟದಿಂದ ಎದುರಾಳಿಗಳ ಸದ್ದಡಗಿಸಿದ್ದಾರೆ. ಎರಡೂ ತಂಡಗಳೂ ಬ್ಯಾಟಿಂಗ್ ನಲ್ಲಿ ಘಟಾಘಟಿಗಳು ಎಂದೇ ಪರಿಚಿತವಾಗಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರೋಚಕತೆ ನಿರೀಕ್ಷಿಸಬಹುದು.
ಕೋಲ್ಕೊತ್ತಾ ತಂಡ ಈ ಬಾರಿ ಭರ್ಜರಿ ಫಾರ್ಮ್ ಪ್ರದರ್ಶಿಸಿತ್ತು. ಇದುವರೆಗೆ ಯಾವುದೇ ಐಪಿಎಲ್ ನಲ್ಲಿ ಯಾವುದೇ ತಂಡ ಗಳಿಸಿರದ ಪಾಸಿಟಿವ್ 1.428 ರನ್ ರೇಟ್ ನೊಂದಿಗೆ ಪ್ಲೇ ಆಫ್ ಗೇರಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಈ ಬಾರಿ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲೊಂದು ಎನಿಸಿಕೊಂಡಿದೆ.
ಇತ್ತ ಸನ್ ರೈಸರ್ಸ್ ಹೈದರಾಬಾದ್ ಕೂಡಾ ನಡುವೆ ಕೊಂಚ ಮಂಕಾದರೂ ಉಳಿದಂತೆ ಈ ಬಾರಿ ಟೂರ್ನಿಯಲ್ಲಿ ಎರಡು ಬಾರಿ ಗರಿಷ್ಠ ಮೊತ್ತ ಪೇರಿಸಿ ದಾಖಲೆ ಮಾಡಿತ್ತು. ಹೈದರಾಬಾದ್ ಬ್ಯಾಟಿಂಗ್ ನೆನೆಸಿಕೊಂಡರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಬಹುದು. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾರಂತಹ ಬಲಾಢ್ಯ ಬ್ಯಾಟಿಂಗ್ ಪಡೆಯಿದೆ. ಜೊತೆಗೆ ಪ್ಯಾಟ್ ಕುಮಿನ್ಸ್ ಚಾಣಕ್ಷ್ಯ ನಾಯಕತ್ವ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಈ ಐಪಿಎಲ್ ನ ಎರಡೂ ಅಗ್ರ ತಂಡಗಳು ಇಂದು ಮೊದಲ ಪ್ಲೇ ಆಫ್ ನಲ್ಲಿ ಸೆಣಸಾಡಲಿವೆ. ಹೀಗಾಗಿ ಇಂದಿನ ಜಿದ್ದಾಜಿದ್ದಿನ ಪಂದ್ಯ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.