ಕೊಲ್ಕೊತ್ತಾ: ಐಪಿಎಲ್ ನ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಕೆಟ್ಟ ಹವಾಮಾನದಿಂದಾಗಿ ವಿಮಾನದಲ್ಲೇ ಊರೂರು ಅಲೆದಾಡುವ ಪರಿಸ್ಥಿತಿ ಎದುರಾಯಿತು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಬಳಿಕ ಕೋಲ್ಕೊತ್ತಾಗೆ ಚಾರ್ಟೆರ್ಡ್ ಫ್ಲೈಟ್ ಏರಿದ್ದ ಕ್ರಿಕೆಟಿಗರಿಗೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಕೋಲ್ಕೊತ್ತಾದಲ್ಲಿ ಲ್ಯಾಂಡ್ ಆಗಲು ಸಾಧ‍್ಯವಾಗದೇ ಗುವಾಹಟಿ ಕಡೆಗೆ ಮೊದಲು ಡೈವರ್ಟ್ ಮಾಡಲಾಯಿತು.
ನಂತರ ಕೋಲ್ಕೊತ್ತಾದಿಂದ ಕ್ಲಿಯರೆನ್ಸ್ ಸಿಕ್ಕ ಹಿನ್ನಲೆಯಲ್ಲಿ ಮತ್ತೆ ವಿಮಾನ ಕೋಲ್ಕೊತ್ತಾ ಕಡೆಗೆ ತೆರಳಿತು. ಆದರೆ ಆಗಲೂ ವಿಮಾನಕ್ಕೆ ಕೋಲ್ಕೊತ್ತಾದಲ್ಲಿ ಲ್ಯಾಂಡ್ ಆಗಲು ಸಾಧ‍್ಯವಾಗದೇ ವಾರಣಾಸಿಯಲ್ಲಿ ಲ್ಯಾಂಡ್ ಮಾಡಲಾಯಿತು. ಈ ವಿಮಾನದಲ್ಲಿ ಕೆಕೆಆರ್ ಆಟಗಾರರು, ಸಹಾಯಕ ಸಿಬ್ಬಂದಿಗಳು ಎಲ್ಲರೂ ಇದ್ದರು.
7.25 ಕ್ಕೆ ಕೋಲ್ಕೊತ್ತಾದಲ್ಲಿ ಲ್ಯಾಂಡ್ ಆಗಬೇಕಾಗಿದ್ದ ವಿಮಾನ ರಾತ್ರಿ 11 ಗಂಟೆಯಾದರೂ ಲ್ಯಾಂಡ್ ಆಗಲಿಲ್ಲ. ಕೋಲ್ಕೊತ್ತಾಗೆ ತೆರಳಬೇಕಾಗಿದ್ದ ಆಟಗಾರರು ಹವಾಮಾನ ವೈಪರೀತ್ಯದಿಂದ ಗುವಾಹಟಿ, ವಾರಣಾಸಿ ಎಂದೆಲ್ಲಾ ಸುತ್ತಾಡುವಂತಾಯಿತು. ಕೊನೆಗೆ ವಾರಣಾಸಿಯಲ್ಲೇ ರಾತ್ರಿ ಕಳೆದ ಆಟಗಾರರು ಮರುದಿನ ಕೋಲ್ಕೊತ್ತಾಗೆ ಪ್ರಯಾಣ ಬೆಳೆಸಬೇಕಾಯಿತು.