ಹೈದರಾಬಾದ್: ಐಪಿಎಲ್ 2024 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಜಿದ್ದಾಜಿದ್ದಿನ ಪಂದ್ಯ ನಡೆಯಲಿದೆ. ಎರಡೂ ತಂಡಕ್ಕೂ ಪ್ಲೇ ಆಫ್ ದೃಷ್ಟಿಯಿಂದ ಇದು ಮಹತ್ವದ ಪಂದ್ಯವಾಗಿದೆ.
ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ 11 ಪಂದ್ಯಗಳಿಂದ 6 ಗೆಲುವುಗಳೊಂದಿಗೆ 12 ಅಂಕ ಸಂಪಾದಿಸಿದ್ದು ಅಂಕಪಟ್ಡಿಯಲ್ಲಿ 5 ನೇ ಸ್ಥಾನದಲ್ಲಿದೆ. ಟಾಪ್ 3 ರಲ್ಲಿದ್ದ ಲಕ್ನೋ ಪಡೆಗೆ ಕಳೆದ ಪಂದ್ಯದ ಹೀನಾಯ ಸೋಲು ಹಿನ್ನಡೆಗೆ ಕಾರಣವಾಗಿದೆ.
ಕಳೆದ ಪಂದ್ಯದಲ್ಲಿ ರಾಹುಲ್ ಪಡೆ ಬ್ಯಾಟಿಂಗ್ ನಲ್ಲಿ ಕಳೆಗುಂದಿತ್ತು. ನಾಯಕ ಕೆಎಲ್ ರಾಹುಲ್ ಕಡೆಯಿಂದಲೂ ಖ್ಯಾತಿಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ರಾಹುಲ್ ಪಡೆ ಏಳು-ಬೀಳುಗಳನ್ನು ಕಾಣುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದೀಗ ಗೆದ್ದು ಟಾಪ್ 4 ಕ್ಕೇರುವ ಒತ್ತಡದಲ್ಲಿದೆ.
ಅತ್ತ ಸನ್ ರೈಸರ್ಸ್ ಹೈದರಾಬಾದ್ ತಂಡದ್ದೂ ಇದೇ ಕತೆ. ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಹೈದರಾಬಾದ್ ಕಳೆದ ಪಂದ್ಯದಲ್ಲಿ ಸೋತಿದ್ದರಿಂದ ಸಂಕಷ್ಟಕ್ಕೀಡಾಯಿತು. ಇದೀಗ ಒಟ್ಟು 11 ಪಂದ್ಯಗಳಿಂದ 6 ಗೆಲುವು ಸಂಪಾದಿಸಿರುವ ಹೈದರಾಬಾದ್ ಅಂಕ ಪಟ್ಟಿಯಲ್ಲಿ ಲಕ್ನೋಗಿಂತ ಕೇವಲ ಒಂದು ಸ್ಥಾನ ಮೇಲೆ ಅಂದರೆ ನಾಲ್ಕನೇ ಸ್ಥಾನದಲ್ಲಿದ್ದು, ಇಂದು ಗೆಲ್ಲುವ ಒತ್ತಡದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.