ಐಪಿಎಲ್ 2024: ಕೊನೆಯ ಲೀಗ್ ಪಂದ್ಯವನ್ನು ಗೆದ್ದರೂ ಲಕ್ನೋ ಸೂಪರ್ ಜೈಂಟ್ಸ್ ಔಟ್

Krishnaveni K

ಶನಿವಾರ, 18 ಮೇ 2024 (08:30 IST)
ಮುಂಬೈ: ಐಪಿಎಲ್ 2024 ರಲ್ಲಿ ಕೊನೆಯ ಲೀಗ್ ಪಂದ್ಯವನ್ನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್ ಗಳ ಗೆಲುವು ಕಂಡಿದೆ. ಹಾಗಿದ್ದರೂ ಪ್ಲೇ ಆಫ್ ಗೇರಲು ವಿಫಲವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ದೇವದತ್ತ್ ಪಡಿಕ್ಕಲ್ ಶೂನ್ಯಕ್ಕೆ ನಿರ್ಗಮಿಸಿದರೆ ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ 55 ರನ್ ಗಳಿಸಿ ಮಿಂಚಿದರು. ಅವರಿಗೆ ಸಾಥ್ ನೀಡಿದ ಸ್ಟಾಯ್ನಿಸ್ 28 ರನ್ ಗಳಿಸಿ ಔಟಾದರು. ಆದರೆ ತಂಡದ ಮೊತ್ತ ಉಬ್ಬಿಸಿದ್ದು ನಿಕಲಸ್ ಪೂರನ್. ಹೊಡೆಬಡಿಯ ಶೈಲಿಯಲ್ಲಿ ಬ್ಯಾಟ್ ಬೀಸಿದ ಪೂರನ್ 29 ಎಸೆತಗಳಿಂಧ 75 ರನ್ ಚಚ್ಚಿದರು.  ಕೊನೆಯಲ್ಲಿ ಆಯುಷ್ ಬದಾನಿ 10 ಎಸೆತಗಳಿಂದ 22 ರನ್ ಗಳಿಸಿದರು. ಇದರಿಂದಾಗಿ ತಂಡ 200 ರ ಗಡಿ ದಾಟಿತು. ಮುಂಬೈ ಪರ ಎನ್.ತುಷಾರ  ಮತ್ತು ಪಿಯೂಷ್ ಚಾವ್ಲಾ ತಲಾ 3ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈಗೆ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. 38 ಎಸೆತ ಎದುರಿಸಿದ ಅವರು 68 ರನ್ ಗಳಿಸಿದರು. ಕೊನೆಯಲ್ಲಿ  ನಮನ್ ಧೀರ್ 28 ಎಸೆತಗಳಿಂದ 62 ರನ್ ಚಚ್ಚಿದರೂ ಅವರಿಗೆ ಸಾಥ್ ಸಿಗದೇ ತಂಡ ಸೋತು ಹೋಯಿತು. ಅಂತಿಮವಾಗಿ ಮುಂಬೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದು ಮುಂಬೈ ಇಂಡಿಯನ್ಸ್ ಪಾಲಿಗೆ 10 ನೇ ಸೋಲಾಗಿತ್ತು. ಈ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಪಂಧ್ಯವಾಡಿದ ಮುಂಬೈ 4 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು. ಇತ್ತ ಲಕ್ನೋ 14 ಪಂದ್ಯಗಳಿಂದ 7 ಗೆಲುವು ಕಂಡರೂ ರನ್ ರೇಟ್ ಕೊರತೆಯಿಂದಾಗಿ ಪ್ಲೇ ಆಫ್ ರೇಸ್ ನಿಂದ ಹೊರಬಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ