ಗುವಾಹಟಿ: ಐಪಿಎಲ್ 2024 ರಲ್ಲಿ ಸತತವಾಗಿ ಗೆಲ್ಲುತ್ತಲೇ ಬಂದಿದ್ದ ರಾಜಸ್ಥಾನ್ ರಾಯಲ್ಸ್ ಈಗ ಕೊನೆಯ ಹಂತದಲ್ಲಿ ಈಗ ಸತತವಾಗಿ ನಾಲ್ಕನೇ ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್ ಗಳ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಮತ್ತೊಮ್ಮೆ ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. 20 ಓವರ್ ಗಳಲ್ಲಿ ರಾಜಸ್ಥಾನ್ ಕಲೆ ಹಾಕಿದ್ದು ಕೇವಲ 144 ರನ್. ರಿಯಾನ್ ಪರಾಗ್ 48 ರನ್ ಗಳಿಸಿದ್ದಷ್ಟೇ ದೊಡ್ಡ ಸ್ಕೋರ್. ಅವರಿಗೆ ಸಾಥ್ ನೀಡಿದ ರವಿಚಂದ್ರನ್ ಅಶ್ವಿನ್ 28 ರನ್ ಗಳಿಸಿದರು. ಯಾಕೋ ರಾಜಸ್ಥಾನ್ ಬ್ಯಾಟಿಂಗ, ಬೌಲಿಂಗ್ ಇದ್ದಕ್ಕಿದ್ದಂತೆ ಕಳೆಗುಂದಿದಂತೆ ಕಾಣುತ್ತಿದೆ. ಪಂಜಾಬ್ ಪರ ಸ್ಯಾಮ್ ಕ್ಯುರೆನ್, ಹರ್ಷಲ್ ಪಟೇಲ್, ರಾಹುಲ್ ಚಹರ್ ತಲಾ 2 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 18.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ಪಂಜಾಬ್ ಗೂ ಅಗ್ರ ಕ್ರಮಾಂಕ ಕೈಕೊಟ್ಟಿತ್ತು. ಆದರೆ ನಾಯಕ ಸ್ಯಾಮ್ ಕ್ಯುರೇನ್ 63 ರನ್ ಗಳಿಸಿ ಅಜೇಯರಾಗುಳಿದು ತಂಡಕ್ಕೆ ಗೆಲುವು ಕೊಡಿಸಿದರು. ರಾಜಸ್ಥಾನ್ ಪರ ಆವೇಶ್ ಖಾನ್, ಯಜುವೇಂದ್ರ ಚಾಹಲ್ ತಲಾ 2 ವಿಕಟ್ ಕಬಳಿಸಿದರು.
ರಾಜಸ್ಥಾನ್ ಈಗಾಗಲೇ 16 ಅಂಕಗಳನ್ನು ಪಡೆದುಕೊಂಡಿದ್ದು ಪ್ಲೇ ಆಫ್ ಗೆ ಅರ್ಹತೆ ಪಡೆದಿದೆ. ಹೀಗಾಗಿ ಈ ಪಂದ್ಯದ ಸೋಲು-ಗೆಲುವು ತಂಡದ ಮೇಲೆ ಬಾಧಕವಾಗಿಲ್ಲ. ಹಾಗಿದ್ದರೂ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲದೇ ಇದ್ದರೆ ಅಂಕಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಕುಸಿಯಬಹುದು.