ಐಪಿಎಲ್ 2024: ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್ ಗೆ ಇಂದು ಕೊನೆಯ ಪಂದ್ಯ

Krishnaveni K

ಶುಕ್ರವಾರ, 17 ಮೇ 2024 (09:06 IST)
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಇಂದು ಕೊನೆಯ ಪಂದ್ಯವಾಡಲು ಸಜ್ಜಾಗಿದೆ. ಎರಡೂ ತಂಡಗಳೂ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ.

ಮುಂಬೈ ಇಂಡಿಯನ್ಸ್ ಈ ಬಾರಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಣಕ್ಕಿಳಿದಿತ್ತು. ಆದರೆ ಟೂರ್ನಿಯುದ್ದಕ್ಕೂ ನೀರಸ ಪ್ರದರ್ಶನ ನೀಡಿತ್ತು. ಆರಂಭದಲ್ಲಿಯೇ ತಪ್ಪು ನಿರ್ಧಾರಗಳು, ಸತತ ಸೋಲಿನಿಂದ ಮುಂಬೈ ಸಾಕಷ್ಟು ಟ್ರೋಲ್ ಗೊಳಗಾಗಿತ್ತು. ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿದ ಮೇಲೆ ಮುಂಬೈ ತಂಡಕ್ಕೆ ಅಭಿಮಾನಿಗಳಿಂದಲೂ ಹೆಚ್ಚು ಬೆಂಬಲ ಸಿಗಲಿಲ್ಲ.

ಆದರೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮುಂತಾದ ಕ್ರಿಕೆಟಿಗರಿಗೆ ಟಿ20 ವಿಶ್ವಕಪ್ ಗೆ ಮುನ್ನ ಅಭ್ಯಾಸ ಮಾಡಲು ಇಂದಿನ ಪಂದ್ಯ ವೇದಿಕೆಯಾಗಲಿದೆ. ರೋಹಿತ್ ಮತ್ತು ಹಾರ್ದಿಕ್ ಕಳೆದ ಕೆಲವು ಪಂದ್ಯಗಳಿಂದ ಬ್ಯಾಟಿಂಗ್ ನಲ್ಲಿ ಪೇಲವವಾಗಿದ್ದಾರೆ. ಅವರಿಬ್ಬರೂ ಫಾರ್ಮ್ ಪ್ರದರ್ಶಿಸಿ ತವರಿನ ಅಭಿಮಾನಿಗಳನ್ನು ಖುಷಿಪಡಿಸಬೇಕಿದೆ.

ಇತ್ತ ಲಕ್ನೋ ಸೂಪರ್ ಜೈಂಟ್ಸ್ ನದ್ದೂ ಇದೇ ಕತೆ. ಇದುವರೆಗೆ ಆಡಿದ 13 ಪಂದ್ಯಗಳ ಕೆಎಲ್ ರಾಹುಲ್ ಪಡೆ 6 ಗೆಲುವು ಕಂಡಿತ್ತು. ಈ ಪಂದ್ಯದಲ್ಲಿ ಗೆದ್ದರೂ ಪ್ಲೇ ಆಫ್ ಅವಕಾಶ ಸಿಗಲ್ಲ. ಹೀಗಾಗಿ ಇದು ಕೇವಲ ಔಪಚಾರಿಕ ಪಂದ್ಯವಾಗಿದೆ. ಆದರೆ ಕೊನೆಯ ಪಂದ್ಯದಲ್ಲಿ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಈ ಪಂದ್ಯ ಸಂಜೆ 7 .30 ಕ್ಕೆ ಆರಂಭವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ