ಮೊಹಾಲಿ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ನಾಲ್ಕನೇ ಬಾರಿಗೆ ಕೊನೆಯ ಓವರ್ ನಲ್ಲಿ ಸೋಲು ಅನುಭವಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು 9 ರನ್ ಗಳಿಂದ ಸೋತಿದೆ.
ಇದರೊಂದಿಗೆ ಮುಂಬೈ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.ರೋಹಿತ್ ಶರ್ಮಾ 36, ತಿಲಕ್ ವರ್ಮ ಅಜೇಯ 34 ರನ್ ಗಳಿಸಿದರು. ಆದರೆ ಮುಂಬೈಗೆ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದು ಸೂರ್ಯಕುಮಾರ್ ಯಾದವ್ ಅರ್ಧಶತಕ. ಒಟ್ಟು 53 ಎಸೆತ ಎದುರಿಸಿದ ಅವರು 78 ರನ್ ಚಚ್ಚಿದರು. ಪಂಜಾಬ್ ಪರ ಹರ್ಷಲ್ ಪಟೇಲ್ 3, ಸ್ಯಾಮ್ ಕ್ಯುರೆನ್ 2, ರಬಾಡ 1 ವಿಕೆಟ್ ತಮ್ಮದಾಗಿಸಿಕೊಂಡರು.
ಈ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭವೇ ಉತ್ತಮವಾಗಿರಲಿಲ್ಲ. ಅಗ್ರ ನಾಲ್ವರು ಬ್ಯಾಟಿಗರು ಏಕಂಕಿಗೆ ಪೆವಿಲಿಯನ್ ಸೇರಿಕೊಂಡರು. ಒಂದು ಹಂತದಲ್ಲಿ 49 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದು ಆಶುತೋಷ್ ಶರ್ಮ ಮತ್ತು ಶಶಾಂಕ್ ಸಿಂಗ್. ಶಶಾಂಕ್ 25 ಎಸೆತಗಳಿಂದ 41 ರನ್ ಗಳಿಸಿದರೆ ಆಶುತೋಷ್ 28 ಎಸೆತಗಳಿಂದ 61 ರನ್ ಚಚ್ಚಿದರು.
ಆದರೆ ಗೆಲುವಿನ ಬಾಗಿಲವರೆಗೂ ಬಂದು ಮತ್ತೊಮ್ಮೆ ಪಂಜಾಬ್ ಎಡವಿಬಿತ್ತು. ಮುಂಬೈ ಪರ ಜಸ್ಪ್ರೀತ್ ಬುಮ್ರಾ, ಗೆರಾಲ್ಡ್ ಕೊಯ್ಟ್ಝೀ ತಲಾ 3, ಕಬಳಿಸಿದರು. ಈ ಪಂದ್ಯದಲ್ಲಿ 4 ಓವರ್ ಗಳ ಪೂರ್ತಿಕ ಕೋಟಾ ಬೌಲಿಂಗ್ ನಡೆಸಿದ ನಾಯಕ ಹಾರ್ದಿಕ್ ಪಾಂಡ್ಯ 1 ವಿಕೆಟ್ ತಮ್ಮದಾಗಿಸಿಕೊಂಡರು. ಅಂತಿಮವಾಗಿ ಪಂಜಾಬ್ 19.1 ಓವರ್ ಗಳಲ್ಲಿ 183 ರನ್ ಗಳಿಗೆ ಸರ್ವಪತನ ಕಂಡಿತು.