ಮೊಹಾಲಿ: ಐಪಿಎಲ್ 2024 ರ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದ ಸೋಲಿನ ಹತಾಶೆ ಮುರಿದು ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.
ಇಂದು ಮೊಹಾಲಿಯಲ್ಲಿ ಪಂದ್ಯ ನಡೆಯಲಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸ್ವಲ್ಪದರಲ್ಲೇ ಪಂದ್ಯ ಸೋತಿತ್ತು. ಮುಖ್ಯವಾಗಿ ತಂಡದ ಬ್ಯಾಟಿಂಗ್ ಮಧ್ಯಮ ಕ್ರಮಾಂಕದಲ್ಲಿ ಕೈಕೊಟ್ಟಿತ್ತು. ಆದರೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಹಿಟ್ ಮ್ಯಾನ್ ಕ್ರೀಸ್ ನಲ್ಲಿದ್ದರೆ ಯಾವ ಮೊತ್ತವೂ ಕಷ್ಟವೆನಿಸದು. ಆದರೆ ಕಳೆದ ಪಂದ್ಯದಲ್ಲಿ ರೋಹಿತ್ ಗೆ ತಕ್ಕ ಸಾಥ್ ಸಿಗದೇ ಸೋತಿದ್ದರು. ಮುಂಬೈಗೆ ಮುಖ್ಯವಾಗಿ ಕಾಡುತ್ತಿರುವುದು ಹಾರ್ದಿಕ್ ಪಾಂಡ್ಯ ಫಾರ್ಮ್ ಮತ್ತು ಫಿಟ್ನೆಸ್. ಹಾರ್ದಿಕ್ ಗೆ ಸಂಪೂರ್ಣ ಕೋಟಾ ಬೌಲಿಂಗ್ ಮಾಡುವಷ್ಟು ಫಿಟ್ನೆಸ್ ಇಲ್ಲ. ಬ್ಯಾಟಿಂಗ್ ನಲ್ಲೂ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ತಂಡಕ್ಕೆ ದೊಡ್ಡ ಹೊಡೆತವಾಗಿದೆ.
ಸೂರ್ಯ ಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಆಡಿದರೆ ದೊಡ್ಡ ಮೊತ್ತ ಇಲ್ಲದೇ ಹೋದರೆ ಶೂನ್ಯ ಎನ್ನುವಂತಹ ಆಟಗಾರರು. ನಂಬಿಕಸ್ಠ ಬ್ಯಾಟಿಗನ ಕೊರತೆ ಮುಂಬೈಗೆ ಎದ್ದು ಕಾಣುತ್ತಿದೆ. ಆದರೆ ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ, ಆಕಾಶ್ ಮಧ್ವಾಲ್ ಫಾರ್ಮ್ ನಲ್ಲಿರುವುದು ಪ್ಲಸ್ ಪಾಯಿಂಟ್.
ಇತ್ತ ಪಂಜಾಬ್ ಕಿಂಗ್ಸ್ ಗೆ ನಾಯಕ ಶಿಖರ್ ಧವನ್ ಅವರೇ ದೊಡ್ಡ ಶಕ್ತಿ. ಫಾರ್ಮ್ ನಲ್ಲಿರುವ ಶಿಖರ್ ಧವನ್ ಗೆ ಯಾಕೋ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ. ಈ ಟೂರ್ನಮೆಂಟ್ ನಲ್ಲಿ ಪಂಜಾಬ್ ಆಡಿದ 6 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 2 ರನ್. ಆದರೆ ಸೋತ ಎಲ್ಲಾ ಪಂದ್ಯಗಳಲ್ಲೂ ಕೊನೆಯ ಹಂತದಲ್ಲಿ ಜಾರಿಬಿದ್ದಿತ್ತು. ಕಳೆದ ಎರಡು ಪಂದ್ಯಗಳನ್ನು ಸೋತಿರುವ ಪಂಜಾಬ್ ಗೆ ಈಗ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ಸವಾಲು ಎದುರಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.