ಚೆನ್ನೈ: ಐಪಿಎಲ್ 2024 ರ ಆರಂಭಿಕ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳಿಂದ ಸೋಲು ಅನುಭವಿಸಿದೆ. ಈ ಮೂಲಕ ನಾಯಕನಾಗಿ ಮೊದಲ ಪಂದ್ಯದಲ್ಲೇ ಸಿಎಸ್ ಕೆಯ ಋತುರಾಜ್ ಗಾಯಕ್ ವಾಡ್ ಗೆಲುವು ದಾಖಲಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಅನೂಜ್ ರಾವತ್ 48, ದಿನೇಶ್ ಕಾರ್ತಿಕ್ ಅಜೇಯ 38 ರನ್ ಗಳಿಸಿದರು. ಮುಸ್ತಾಫಿಝುರ್ 4 ವಿಕೆಟ್ ಕಬಳಿಸಿ ಮಿಂಚಿದರು. ಆರ್ ಸಿಬಿಗೆ ಅಗ್ರ ಬ್ಯಾಟಿಗರು ಕೈ ಕೊಟ್ಟಿದ್ದೇ ಮುಳುವಾಯಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಸಿಎಸ್ ಕೆ 18.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಮೊದಲ ಗೆಲುವು ದಾಖಲಿಸಿತು. ಚೆನ್ನೈ ಪರ ರಚಿನ್ ರವೀಂದ್ರ ಕೇವಲ 15 ಎಸೆತಗಳಲ್ಲಿ 37, ಅಜಿಂಕ್ಯಾ ರೆಹಾನೆ 19 ಎಸೆತಗಳಿಂದ 27, ಡ್ಯಾರಿಲ್ ಮಿಚೆಲ್ 22, ಶಿವಂ ದುಬೆ ಅಜೇಯ 34, ರವೀಂದ್ರ ಜಡೇಜಾ ಅಜೇಯ 25 ರನ್ ಗಳಿಸಿದರು.
ಈ ಮೂಲಕ ಋತುರಾಜ್ ಗೆ ಆರಂಭಿಕ ಪಂದ್ಯದಲ್ಲೇ ಗೆಲುವಿನ ಸವಿ ಸಿಕ್ಕಿದೆ. ಚೆನ್ನೈ ಮೈದಾನ ನಿನ್ನೆ ಹಳದಿ ರಂಗಿನಿಂದ ತುಂಬಿ ಹೋಗಿತ್ತು. ವಿಶೇಷವಾಗಿ ಧೋನಿ ಆಡುವುದನ್ನು ನೋಡಲೆಂದೇ ಅಭಿಮಾನಿಗಳು ಬಂದಿದ್ದರು. ಆದರೆ ಧೋನಿ ನಿನ್ನೆ ಕೀಪಿಂಗ್ ಮಾತ್ರ ಮಾಡಿದರು. ಬ್ಯಾಟಿಂಗ್ ಗೆ ಅವರಿಗೆ ಅವಕಾಶ ಸಿಗಲಿಲ್ಲ.