ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಎರಡು ಪಂದ್ಯಗಳ ಪೈಕಿ ಆರ್ ಸಿಬಿ ಒಂದು ಸೋಲು, ಒಂದು ಗೆಲುವು ಕಂಡಿದೆ. ಇದೀಗ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಆರ್ ಸಿಬಿಗೆ ಮತ್ತೊಂದು ಗೆಲುವಿನ ಮೂಲಕ ಬಡ್ತಿ ಪಡೆಯಲು ಅವಕಾಶ ಸಿಕ್ಕಂತಾಗಿದೆ. ತವರಿನ ಪ್ರೇಕ್ಷಕರ ಮುಂದೆ ಆಡುವಾಗ ಆರ್ ಸಿಬಿ ಉತ್ಸಾಹ ಬೇರೆಯದೇ ಲೆವೆಲ್ ನಲ್ಲಿರುತ್ತದೆ.
ಆದರೆ ಕಳೆದ ಎರಡೂ ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ವಿಫಲವಾಗಿದ್ದಾರೆ. ಆರ್ ಸಿಬಿಗೆ ಫಾಡು ಪ್ಲೆಸಿಸ್, ಮ್ಯಾಕ್ಸ್ ವೆಲ್, ಕೊಹ್ಲಿ ಬ್ಯಾಟಿಂಗ್ ಶಕ್ತಿ. ಈ ಮೂವರು ಆಟಗಾರರು ಏಕಕಾಲಕ್ಕೆ ಸಿಡಿದರೆ ಎದುರಾಳಿ ಬೌಲರ್ ಗಳ ಬಳಿ ಉತ್ತರವೇ ಇರುವುದಿಲ್ಲ. ಇನ್ನು, ಬೌಲಿಂಗ್ ನಲ್ಲಿ ಮೊದಲ ಪಂದ್ಯದಲ್ಲಿ ಕಳೆಗುಂದಿದ್ದರೂ ಎರಡನೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಫಾರ್ಮ್ ಪ್ರದರ್ಶಿಸಿರುವುದು ಸಮಾಧಾನಕರ ಸಂಗತಿ.
ಇತ್ತ ಕೋಲ್ಕೊತ್ತಾ ನೈಟ್ ರೈಡರ್ಸ್ ಇದುವರೆಗೆ ಆಡಿದ್ದು ಒಂದೇ ಪಂದ್ಯ. ಆ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಕಂಡಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಬಳಿ ಟಿ20 ಸ್ಪೆಷಲಿಸ್ಟ್ ಬ್ಯಾಟಿಗರ ದಂಡೇ ಇದೆ. ಹೀಗಾಗಿ ಕೆಕೆಆರ್ ಕಠಿಣ ಎದುರಾಳಿಯಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.