ಜೈಪುರ: ಐಪಿಎಲ್ 2024 ರ ಮೊದಲ ಪಂದ್ಯದಲ್ಲೇ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ 20 ರನ್ ಗಳ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಕಲೆ ಹಾಕಿತು. ಸಂಜು ಸ್ಯಾಮ್ಸನ್ 52 ಎಸೆತ ಎದುರಿಸಿ 6 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ರಿಯಾನ್ ಪರಾಗ್ 29 ಎಸೆತಗಳಿಂದ 43 ರನ್ ಗಳಿಸಿದರು. ಲಕ್ನೋ ಪರ ನವೀನ್ ಉಲ್ ಹಕ್ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ಲಕ್ನೋಗೆ ನಾಯಕ ಕೆಎಲ್ ರಾಹುಲ್ ಆಸರೆಯಾದರು. ಆದರೆ 44 ಎಸೆತಗಳಿಂದ 58 ರನ್ ಗಳಿಸುವಷ್ಟರಲ್ಲಿ ರಾಹುಲ್ ಔಟಾದರು. ಬಳಿಕ ನಿಕಲಸ್ ಪೂರನ್ ಅಬ್ಬರದ ಬ್ಯಾಟಿಂಗ್ ನಡೆಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ 41 ಎಸೆತ ಎದುರಿಸಿದ ಅವರು 64 ರನ್ ಚಚ್ಚಿದರೂ ತಂಡಕ್ಕೆ ಗೆಲುವು ಕೊಡಿಸಲಾಗಲಿಲ್ಲ. ಅಂತಿಮವಾಗಿ ಲಕ್ನೋ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಂದಿನ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಸೆಣಸಾಡುತ್ತಿದೆ. ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿದೆ. ಇತ್ತೀಚೆಗಿನ ವರದಿ ಬಂದಾಗ ಗುಜರಾತ್ 12 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ. ವೃದ್ಧಿಮಾನ್ ಸಹಾ 19, ನಾಯಕ ಶುಬ್ಮನ್ ಗಿಲ್ 31, ಅಝ್ಮತುಲ್ಲಾ ಒಮ್ರಾಝೈ 17 ರನ್ ಗಳಿಸಿ ಔಟಾಗಿದ್ದಾರೆ. ಇದೀಗ ಸಾಯಿ ಸುದರ್ಶನ್ 30, ಡೇವಿಡ್ ಮಿಲ್ಲರ್ 1 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.