ಐಪಿಎಲ್ 2024 ಪ್ಲೇ ಆಫ್ ಗೆ ಆರ್ ಸಿಬಿ: ಸಿಎಸ್ ಕೆ ಮಣಿಸಲು ಕಾರಣವಾದ ನಾಲ್ಕು ಅಂಶಗಳು

Krishnaveni K

ಭಾನುವಾರ, 19 ಮೇ 2024 (00:01 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಫೀನಿಕ್ಸ್ ನಂತೆ ಮೇಲೇಳುವುದು ಹೇಗೆ ಎಂದು ಆರ್ ಸಿಬಿ ತೋರಿಸಿಕೊಟ್ಟಿದೆ. ಆರಂಭಿಕ ಪಂದ್ಯದಲ್ಲಿ ಸತತವಾಗಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದ್ದ ಆರ್ ಸಿಬಿ ಇದೀಗ ಸಿಎಸ್ ಕೆ ವಿರುದ್ಧ ಗೆದ್ದು ಪ್ಲೇ ಆಫ್ ಗೆ ಅರ್ಹತೆ ಪಡೆದಿದೆ.

ಇಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯವನ್ನು ಆರ್ ಸಿಬಿ 27 ರನ್ ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಿಯಾಗಿ ಪ್ಲೇ ಆಫ್ ಗೇರಿತು. ಇತ್ತ ಸಿಎಸ್ ಕೆ ಟೂರ್ನಿಯಿಂದ ಹೊರನಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿದ ಆರ್ ಸಿಬಿ ಮಳೆಯ ಅಡಚಣೆಯ ನಡುವೆಯೂ ಅದ್ಭುತ ಬ್ಯಾಟಿಂಗ್ ನಡೆಸಿತು. ನಾಯಕನ ಆಟವಾಡಿದ ಫಾ ಡು ಪ್ಲೆಸಿಸ್ 39 ಎಸೆತಗಳಿಂದ 54 ರನ್ ಗಳಿಸಿದರು. ವಿರಾಟ್ ಕೊಹ್ಲಿ ಕೂಡಾ 29 ಎಸೆತಗಳಿಂದ 47 ರನ್ ಸಿಡಿಸಿದರು. ಮಧ‍್ಯಮ ಕ್ರಮಾಂಕದಲ್ಲಿ ಮತ್ತೊಮ್ಮೆ ತಂಡಕ್ಕೆ ಆಧಾರವಾದ ರಜತ್ ಪಟಿದಾರ್ 41 ರನ್ ಗಳಿಸಿ ಔಟಾದರು. ಆದರೆ ತಂಡದ ಬ್ಯಾಟಿಂಗ್ ಗೇರ್ ಬದಲಾಯಿಸಿದ್ದು ಕ್ಯಾಮರೂನ್ ಗ್ರೀನ್. ಅವರು 17 ಎಸೆತಗಳಿಂದ 38 ರನ್ ಸಿಡಿಸಿ ತಂಡದ ಮೊತ್ತ 200 ರ ಗಡಿ ದಾಟಲು ನೆರವಾದರು. ಇದು ತಂಡದ ಗೆಲುವಿನ ಮೊದಲ ಅಂಶವಾಯಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಗೆ ನಾಯಕ ಋತುರಾಜ್ ಗಾಯಕ್ ವಾಡ್ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಆಘಾತ ತಂದಿತ್ತರು. ಈ ವಿಕೆಟ್ ಗ್ಲೆನ್ ಮ್ಯಾಕ್ಸ್ ವೆಲ್ ಪಾಲಾಯಿತು. ಇದು ಆರ್ ಸಿಬಿ ಗೆಲುವಿಗೆ ಎರಡನೇ ತಿರುವಾಯಿತು. ಬಳಿಕ ಬಂದ ಡೆರಿಲ್ ಮಿಚೆಲ್ ಕೂಡಾ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಜೊತೆಯಾದ ರಚಿನ್ ರವೀಂದ್ರ, ಅಜಿಂಕ್ಯಾ ರೆಹಾನೆ ಅಪಾಯದ ಸೂಚನೆ ನೀಡಿದರು. ಆದರೆ 33 ರನ್ ಗಳಿಸಿದ್ದ ರೆಹಾನೆ ವಿಕೆಟ್ ನ್ನು ಫರ್ಗ್ಯುಸನ್ ಕಬಳಿಸಿದರು. ಆದರೆ ಇನ್ನೊಂದೆಡೆ ರಚಿನ್ ಅರ್ಧಶತಕ ಸಿಡಿಸಿ ಅಪಾಯಕಾರಿಯಾಗಿದ್ದರು. ಆದರೆ ಈ ಹಂತದಲ್ಲಿ ಸ್ವಪ್ನಿಲ್ ಸಿಂಗ್ ಮತ್ತು ದಿನೇಶ್ ಕಾರ್ತಿಕ್ ಕೈಚಳಕದಿಂದ 61 ರನ್ ಗಳಿಸಿದ್ದ ರಚಿನ್ ರನೌಟ್ ಆಗಬೇಕಾಯಿತು. ಇದು ಆರ್ ಸಿಬಿ ಗೆಲುವಿಗೆ ಮೂರನೇ ತಿರುವು ತಂದುಕೊಟ್ಟಿತು. ಇನ್ನೊಂದೆಡೆ ಮಿಚೆಲ್ ಸ್ಯಾಂಟ್ನರ್ ನೀಡಿದ ಕ್ಯಾಚ್ ನ್ನು ನಾಯಕ ಫಾ ಡು ಪ್ಲೆಸಿಸ್ ಒಂದೇ ಕೈಯಿಂದ ಜಿಂಕೆಯಂತೆ ಹಾರಿ ಹಿಡಿದಿದ್ದು ಅಮೋಘವಾಗಿತ್ತು. ಇನ್ನೊಂದೆಡೆ ರನ್ ಗಳಿಸಿದ್ದ ರವೀಂದ್ರ ಜಡೇಜಾ ಅಪಾಯಕಾರಿಯಾಗಿದ್ದರು.

ಆರ್ ಸಿಬಿ ಇಂದು 218 ರನ್ ಗಳಿಸಿದ್ದರೂ ಎದುರಾಳಿಯನ್ನು 200 ರನ್ ಗೇ ಕಟ್ಟಿ ಹಾಕುವ ಅನಿವಾರ್ಯತೆಯಲ್ಲಿತ್ತು. 19 ಓವರ್ ಮುಗಿದಾಗ ಸಿಎಸ್ ಕೆ 186 ರನ್ ಕಲೆ ಹಾಕಿತ್ತು. ಕ್ರೀಸ್ ನಲ್ಲಿ ರವೀಂದ್ರ ಜಡೇಜಾ, ಧೋನಿ ಇದ್ದರು. ಇವರಿಬ್ಬರೂ ಕ್ರೀಸ್ ನಲ್ಲಿದ್ದರೆ ಎಂತಹ ಪ್ರಳಯಾಂತಕರು ಎಂದು ಎಲ್ಲರಿಗೂ ಗೊತ್ತಿರುವುದೇ. ಅಂತಿಮ ಓವರ್ ನ ಮೊದಲ ಎಸೆತವನ್ನು ಸಿಕ್ಸರ್ ಗಟ್ಟಿದ ಧೋನಿ ನಡುಕ ಹುಟ್ಟಿಸಿದರು. ಆದರೆ ಎರಡನೇ ಎಸೆತದಲ್ಲಿ ಔಟಾದರು.  ಮೂರನೇ ಎಸೆತವೂ ಡಾಟ್ ಬಾಲ್ ಆಗಿತ್ತು. ನಾಲ್ಕನೇ ಎಸೆತದಲ್ಲಿ ಕೇವಲ 1 ರನ್ ಬಂತು. ಐದನೇ ಎಸೆತದಲ್ಲಿ ರನ್ ಬಾರದೇ ಇದ್ದಾಗ ಆರ್ ಸಿಬಿ ಸೆಲೆಬ್ರೇಷನ್ ಶುರುವಾಗಿತ್ತು. ಕೊನೆಯ ಎಸೆತದಲ್ಲೂ ರನ್ ನೀಡದೇ ಯಶ್ ದಯಾಳ್ ಅದ್ಭುತ ಬೌಲಿಂಗ್ ಮಾಡಿದ್ದು ಆರ್ ಸಿಬಿ ಗೆಲುವಿನ ನಾಲ್ಕನೇ ಕಾರಣವಾಯಿತು. ಅಂತಿಮವಾಗಿ ಸಿಎಸ್ ಕೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ