ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ ಆಡಲಿದೆ.
ಡೆಲ್ಲಿ ಇದುವರೆಗೆ 9 ಪಂದ್ಯಗಳಿಂದ 4 ಗೆಲುವು ಕಂಡಿದ್ದು ಅಂಕಪಟ್ಟಿಯಲ್ಲಿ ಟಾಪ್ 5 ರೊಳಗೆ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದೆ. ಒಂದು ವೇಳೆ ಡೆಲ್ಲಿ ಇಂದು ಗೆದ್ದರೆ ಕೆಕೆಆರ್ ತಂಡದ ಮೇಲೆ ಹೆಚ್ಚು ಪರಿಣಾಮವಾಗದು. ಆದರೆ ಡೆಲ್ಲಿಗೆ ಇಂದು ಸೋತರೆ ಪ್ಲೇ ಆಪ್ ಹಾದಿ ಬಂದ್ ಆಗಲಿದೆ.
ರಿಷಬ್ ಪಂತ್ ನೇತೃತ್ವದಲ್ಲಿ ಡೆಲ್ಲಿ ಇದುವರೆಗೆ ಏಳು-ಬೀಳಿನ ಹಾದಿ ಕಂಡಿದೆ. ರಿಷಬ್ ಪಂತ್, ಡೇವಿಡ್ ವಾರ್ನರ್ ರಂತಹ ಘಟಾನುಘಟಿ ಆಟಗಾರರ ಜೊತೆಗೆ ಅಕ್ಸರ್ ಪಟೇಲ್ ನಂತಹ ಆಲ್ ರೌಂಡರ್ ಗಳ ಬಲವಿದೆ. ಬೌಲಿಂಗ್ ನಲ್ಲೂ ಕುಲದೀಪ್ ಯಾದವ್ ನಂತಹ ಸ್ಪಿನ್ ಅಸ್ತ್ರವಿದ್ದು ಯಾವುದೇ ಕ್ಷಣದಲ್ಲೂ ಪಂದ್ಯ ತಿರುಗಿಸಬಲ್ಲ ಸಾಮರ್ಥ್ಯವಿದೆ. ಆದರೆ ಈ ಐಪಿಎಲ್ ಪೂರ್ತಿ ಬ್ಯಾಟಿಗರದ್ದೇ ಆಟವಾಗಿದೆ.
ಹೀಗಾಗಿಯೇ ಕೆಕೆಆರ್ ತಂಡ ಈ ಐಪಿಎಲ್ ನಲ್ಲಿ ಮಿಂಚುತ್ತಿದೆ. ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಆಂಡ್ರ್ಯೂ ರಸೆಲ್, ಫಿಲ್ ಸಾಲ್ಟ್ ನಂತಹ ಫಾರ್ಮ್ ನಲ್ಲಿರುವ ಬ್ಯಾಟಿಗರ ದಂಡೇ ಕೆಕೆಆರ್ ಬಳಿಯಿದೆ. ಬೌಲಿಂಗ್ ನಲ್ಲೂ ಕೆಕೆಆರ್ ದುರ್ಬಲ ತಂಡವೇನೂ ಅಲ್ಲ. ಹಾಗಿದ್ದರೂ ಕಳೆದ ಪಂದ್ಯ ಸೋತಿರುವ ಕೆಕೆಆರ್ ಈಗ ಮತ್ತೆ ಗೆಲುವಿನ ಹಳಿಗೆ ಮರಳಲು ಪ್ರಯತ್ನಿಸಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.