ಬೌಲರ್ ಗಳನ್ನು ನೀವೇ ಕಾಪಾಡ್ಬೇಕು: ಬಿಸಿಸಿಐಗೆ ಮೊರೆಯಿಟ್ಟ ರವಿಚಂದ್ರನ್ ಅಶ್ವಿನ್

Krishnaveni K

ಶನಿವಾರ, 27 ಏಪ್ರಿಲ್ 2024 (14:38 IST)
Photo Courtesy: Twitter
ಮುಂಬೈ: ಈ ಐಪಿಎಲ್ ನಲ್ಲಿ ಬೌಲರ್ ಗಳ ಗೋಳು ಕೇಳೋರೇ ಇಲ್ಲ. ಎಲ್ಲಾ ಪಂದ್ಯಗಳಲ್ಲೂ ಬ್ಯಾಟಿಗರು ಯದ್ವಾ ತದ್ವಾ ಚಚ್ಚುತ್ತಿದ್ದರೆ ಬೌಲರ್ ಗಳು ಹೊಡೆಸಿಕೊಳ್ಳುವುದೇ ಆಗಿ ಹೋಯ್ತು.

ಎಷ್ಟೋ ಬೌಲರ್ ಗಳು ಅತ್ಯಂತ ದುಬಾರಿ ರನ್ ನೀಡಿದ ಕುಖ್ಯಾತಿಗೊಳಗಾಗಿದ್ದಾರೆ. ಎಷ್ಟೋ ಬಾರಿ 200 ಪ್ಲಸ್ ರನ್ ಕೂಡಾ ಲೆಕ್ಕಕ್ಕೇ ಇಲ್ಲ ಎಂಬ ಪರಿಸ್ಥಿತಿಯಾಗಿದೆ. ಅದರಲ್ಲೂ ನಿನ್ನೆ ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ 260 ರನ್ ಗಳನ್ನೂ ಯಶಸ್ವಿಯಾಗಿ ಬೆನ್ನಟ್ಟಲಾಯಿತು.

ಈ ಮಟ್ಟಿಗೆ ಬೌಲರ್ ಗಳ ಮಾರಣಹೋಮ ನಡೆಯುತ್ತಿರಬೇಕಾದರೆ ಟೀಂ ಇಂಡಿಯಾ ಕ್ರಿಕೆಟ್, ರಾಜಸ್ಥಾನ್ ರಾಯಲ್ಸ್ ತಂಡದ ರವಿಚಂದ್ರನ್ ಅಶ್ವಿನ್ ನೇರವಾಗಿ ಬಿಸಿಸಿಐಗೇ ನಮ್ಮನ್ನು ಕಾಪಾಡಿ ಎಂದು ಮೊರೆಯಿಟ್ಟಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ಇದೇ ಗತಿಯಾದರೆ ಬೌಲರ್ ಗಳ ಪಾಡು ಕೇಳುವವರಿರಲ್ಲ.

ಹೀಗಾಗಿ ಅಶ್ವಿನ್ ಟ್ವೀಟ್ ಮಾಡಿದ್ದು, ಬೌಲರ್ ಗಳನ್ನು ಕಾಪಾಡಿ ಎಂದು ಬಿಸಿಸಿಐಗೆ ಸಂದೇಶ ನೀಡಿದ್ದಾರೆ. ಅಶ್ವಿನ್ ರ ಈ ಟ್ವೀಟ್ ನ್ನು ನೆಟ್ಟಿಗರೂ ಅನುಮೋದಿಸಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ಸಿಕ್ಸರ್ ಗಳ ದಾಖಲೆಯಾಗುತ್ತಿದೆ. ದಾಖಲೆಯ ಶತಕವಾಗುತ್ತಿದೆ. ಆದರೆ ಎಲ್ಲಾ ತಂಡಗಳ ಬೌಲರ್ ಗಳು ಲೆಕ್ಕಕ್ಕೇ ಇಲ್ಲದಂತಾಗಿದೆ. ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲೂ ಬೌಲರ್ ಗಳು ಅದ್ಭುತ ಪ್ರದರ್ಶನ ನೀಡಿದ ಉದಾಹರಣೆಯೇ ಇಲ್ಲ. ಎಲ್ಲಾ ಪಿಚ್ ಗಳು ಸಪಾಟೆಯಾಗಿದ್ದು, ಬ್ಯಾಟಿಗರಿಗೆ ರನ್ ಹೊಳೆ ಹರಿಸುವುದು ಸುಲಭವಾಗುತ್ತಿದೆ. ಹೀಗೇ ಆದರೆ ಬೌಲರ್ ಗಳ ಭವಿಷ್ಯವಿರಲ್ಲ. ಹೊಸ ಬೌಲರ್ ಗಳು ಹುಟ್ಟಲ್ಲ. ಬೌಲರ್ ಗಳ ಆತ್ಮವಿಶ್ವಾಸವೇ ಕುಗ್ಗುತ್ತಿದೆ. ಕ್ರಿಕೆಟ್ ಎಂದ ಮೇಲೆ ಅಲ್ಲಿ ಬೌಲರ್ ಗಳಿಗೂ ಬೆಲೆಯಿರಬೇಕು. ಇದು ಕೇವಲ ಬ್ಯಾಟಿಗರ ಆಟವಾಗಬಾರದು ಎಂದು ಕ್ರಿಕೆಟ್ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ