ಚೆನ್ನೈ: ಐಪಿಎಲ್ 2024 ರಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ಸತತ ಎರಡನೇ ಬಾರಿಗೆ ಸೋಲುಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯವನ್ನು 78 ರನ್ ಗಳಿಂದ ಹೀನಾಯವಾಗಿ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಅಜಿಂಕ್ಯಾ ರೆಹಾನೆ 9 ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡರು. ಆದರೆ ನಾಯಕ ಋತುರಾಜ್ ಗಾಯಕ್ ವಾಡ್ 54 ಎಸೆತಗಳಿಂದ 98, ಡೆರಿಲ್ ಮಿಚೆಲ್ 52, ಶಿವಂ ದುಬೆ 39 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಹೈದರಾಬಾದ್ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಆರಂಭಿಕ ಟ್ರಾವಿಸ್ ಹೆಡ್ 13, ಅಭಿಷೇಕ್ ಶರ್ಮ 15, ಅನ್ಮೋಲ್ ಪ್ರೀತ್ ಸಿಂಗ್ ಶೂನ್ಯಕ್ಕೆ ನಿರ್ಗಮಿಸಿದರು. ಆಡನ್ ಮಾರ್ಕರಮ್ 32, ಹೆನ್ರಿಚ್ ಕ್ಲಾಸನ್ 20 ರನ್ ಗಳಿಸಿ ತಂಡದ ಮೊತ್ತ 100 ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಹೈದರಾಬಾದ್ 18.5 ಓವರ್ ಗಳಲ್ಲಿ 134 ರನ್ ಗಳಿಗೆ ಆಲೌಟ್ ಆಯಿತು.
ಚೆನ್ನೈ ಪರ ತುಷಾರ್ ದೇಶ್ ಪಾಂಡೆ 4, ಮುಸ್ತಾಫಿರ್ ರೆಹಮಾನ್, ಮತೀಶ ಪತಿರಾಣ ತಲಾ 2 ವಿಕೆಟ್ ಕಬಳಿಸಿದರು. ಇದುವರೆಗೂ ಈ ಕೂಟದಲ್ಲಿ ಹೊಡೆಬಡಿಯ ಆಟದ ಮೂಲಕ ಗಮನ ಸೆಳೆದಿದ್ದ ಹೈದರಾಬಾದ್ ಈಗ ಯಾಕೋ ಕೊಂಚ ಮಂಕಾಗಿದೆ.