ಮುಂಬೈ: ಐಪಿಎಲ್ 2024 ರಲ್ಲಿ ಈ ಬಾರಿ ಮೂರು ತಂಡಗಳು ಹೊಸ ನಾಯಕರೊಂದಿಗೆ ಕಣಕ್ಕಿಳಿಯಲಿದ್ದಾರೆ. ಈ ಪೈಕಿ ಯಾವ ತಂಡದ ನಾಯಕ ಎಷ್ಟು ಸ್ಟ್ರಾಂಗ್ ಎಂದು ನೋಡೋಣ.
ಸನ್ ರೈಸರ್ಸ್ ಹೈದರಾಬಾದ್ ಈ ಬಾರಿ ಮಿನಿ ಹರಾಜಿನಲ್ಲಿ ಪ್ಯಾಟ್ ಕ್ಯುಮಿನ್ಸ್ ರನ್ನು 20 ಕೋಟಿ ರೂ. ತೆತ್ತು ಖರೀದಿ ಮಾಡಿತ್ತು. ತಂಡಕ್ಕೆ ಉತ್ತಮ ನಾಯಕ ನೀಡುವ ಉದ್ದೇಶದಿಂದಲೇ ಹೈದರಾಬಾದ್ ಈ ಖರೀದಿ ಮಾಡಿತ್ತು. ಇದರ ಬೆನ್ನಲ್ಲೇ ಸನ್ ರೈಸರ್ಸ್ ತಂಡ ಪ್ಯಾಟ್ ಕ್ಯುಮಿನ್ಸ್ ರನ್ನು ನಾಯಕರಾಗಿ ನೇಮಕ ಮಾಡಿದೆ. ಆಸ್ಟ್ರೇಲಿಯಾ ಪರ ಯಶಸ್ವೀ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕ್ಯಮಿನ್ಸ್ ಬೌಲಿಂಗ್ ಜೊತೆ ಬ್ಯಾಟಿಂಗ್ ಕೂಡಾ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ನಾಯಕತ್ವದ ವಿಚಾರಕ್ಕೆ ಬಂದರೆ ತಂಡಕ್ಕಾಗಿ ಸ್ವತಃ ನಿಂತು ಆಡುವ ಆಟಗಾರ.
ಹಾರ್ದಿಕ್ ಪಾಂಡ್ಯ ಮುಂಬೈ ತಂಡವನ್ನು ಮರಳಿ ಸೇರಿರುವುದರಿಂದ ಗುಜರಾತ್ ಟೈಟನ್ಸ್ ತಂಡ ಈ ಬಾರಿ ಶುಬ್ಮನ್ ಗಿಲ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಹಾರ್ದಿಕ್ ನೇತೃತ್ವದಲ್ಲಿ ಗುಜರಾತ್ ಭರ್ಜರಿ ಯಶಸ್ಸು ಕಂಡಿತ್ತು. ಈ ಎರಡೂ ಆವೃತ್ತಿಗಳಲ್ಲಿ ಗಿಲ್ ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ನಾಯಕನಾಗಿ ಅವರಿಗೆ ಹೊಸ ಅನುಭವ. ಹಾಗಿದ್ದರೂ ಐಪಿಎಲ್ ನಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡಿರುವ ಗಿಲ್, ನಾಯಕನಾಗಿಯೂ ಅದೇ ಪ್ರದರ್ಶನ ಕಾಯ್ದುಕೊಂಡು ತಂಡಕ್ಕೆ ಮಾದರಿಯಾಗಬಲ್ಲರು.
ಇದುವರೆಗೆ ಮುಂಬೈ ಇಂಡಿಯನ್ಸ್ ಎಂದರೆ ರೋಹಿತ್ ಶರ್ಮಾ ಕ್ಯಾಪ್ಟನ್ ಎಂಬಂತಿದ್ದ ಚಾಂಪಿಯನ್ ತಂಡಕ್ಕೆ ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕರಾಗಿ ಬರುತ್ತಿದ್ದಾರೆ. ಟಿ20 ಮಾದರಿಯಲ್ಲಿ ಅದರಲ್ಲೂ ಐಪಿಎಲ್ ನಲ್ಲಿ ಅತ್ಯುತ್ತಮ ನಾಯಕನಾಗಿ ಹಾರ್ದಿಕ್ ಕೆಲಸ ಮಾಡಿದ್ದಾರೆ. ಗುಜರಾತ್ ನಾಯಕರಾಗಿ ಒಮ್ಮೆ ಚಾಂಪಿಯನ್ ಮತ್ತೊಮ್ಮೆ ರನ್ನರ್ ಅಪ್ ಆದ ಹೆಗ್ಗಳಿಕೆಗೆ ಅವರದ್ದು. ಆದರೆ ಮುಂಬೈ ತಂಡದಲ್ಲಿ ಆಟಗಾರನಾಗಿದ್ದ ಹಾರ್ದಿಕ್ ಗೆ ಇದೇ ಮೊದಲ ಬಾರಿಗೆ ತನ್ನ ಹಳೆಯ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಸಿಕ್ಕಿದೆ. ಜೊತೆಗೆ ತಂಡದಲ್ಲಿ ಕೆಲವರು ಈಗಲೂ ರೋಹಿತ್ ಶರ್ಮಾ ಪರವಾಗಿ ಇದ್ದಾರೆ. ಹೀಗಾಗಿ ಆಂತರಿಕ ಸವಾಲುಗಳನ್ನು ಮೀರಿ ಅವರು ನಾಯಕತ್ವ ಹೇಗೆ ನಿಭಾಯಿಸುತ್ತಾರೆ ನೋಡಬೇಕು.