ಐಪಿಎಲ್ 2024: ಸನ್ ರೈಸರ್ಸ್ ಗೆ ಪ್ಯಾಟ್ ಕ್ಯುಮಿನ್ಸ್ ನಾಯಕ
ಈ ಬಾರಿ ಐಪಿಎಲ್ ನಲ್ಲಿ ಪ್ಯಾಟ್ ಕ್ಯುಮಿನ್ಸ್ ರನ್ನು ಸನ್ ರೈಸರ್ಸ್ ಹೈದರಾಬಾದ್ 20.5 ಕೋಟಿ ರೂ. ಕೊಟ್ಟು ಖರೀದಿ ಮಾಡಿತ್ತು. ಈ ಮೂಲಕ ಐಪಿಎಲ್ ನ ಎರಡನೇ ದುಬಾರಿ ಆಟಗಾರನಿಗೆ ಹೈದರಾಬಾದ್ ನಾಯಕನ ಪಟ್ಟ ನೀಡಿದೆ. ಈ ಮೂಲಕ ಕಳೆಗುಂದಿರುವ ಹೈದರಾಬಾದ್ ಗೆ ಹೊಸ ಬಲ ಸಿಗಬಹುದು ಎಂಬ ವಿಶ್ವಾಸದಲ್ಲಿದೆ.
ಕಳೆದ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ದ.ಆಫ್ರಿಕಾ ಮೂಲದ ಆಡನ್ ಮಾರ್ಕರಮ್ ನಾಯಕರಾಗಿದ್ದರು. ಆದರೆ ಹೈದರಾಬಾದ್ ಗೆ ಅಷ್ಟೊಂದು ಯಶಸ್ಸು ಸಿಕ್ಕಿರಲಿಲ್ಲ. ಈ ಬಾರಿ ಬಹುಶಃ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಉದ್ದೇಶದಿಂದಲೇ ಹೈದರಾಬಾದ್ ಪ್ಯಾಟ್ ಕ್ಯುಮಿನ್ಸ್ ರನ್ನು ಭಾರೀ ಬೆಲೆ ತೆತ್ತು ಖರೀದಿ ಮಾಡಿತ್ತು.
ಕಳೆದ ಐಪಿಎಲ್ ನಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಪ್ಯಾಟ್ ಕ್ಯುಮಿನ್ಸ್ ಆಡಿರಲಿಲ್ಲ. ಈ ಬಾರಿ ಅವರು ಐಪಿಎಲ್ ನಲ್ಲಿ ಭಾರೀ ಬೆಲೆಗೆ ಬಿಕರಿಯಾದರು. ಆಸ್ಟ್ರೇಲಿಯಾ ತಂಡಕ್ಕೆ ಇತ್ತೀಚೆಗಿನ ವರ್ಷಗಳಲ್ಲಿ ನಾಯಕರಾಗಿ ಮಹತ್ವದ ಗೆಲುವು ತಂದುಕೊಟ್ಟಿದ್ದ ನಾಯಕ ಪ್ಯಾಟ್ ಕ್ಯುಮಿನ್ಸ್ ಈಗ ಹೈದರಾಬಾದ್ ಗೆ ಯಶಸ್ಸು ತಂದುಕೊಡುತ್ತಾರಾ ಕಾದುನೋಡಬೇಕು.