IPL 2025: ಆರ್ ಸಿಬಿಯನ್ನು ಗೇಲಿ ಮಾಡಿದ ಅಂಬಟಿ ರಾಯುಡು: ನಂ 1 ಜೋಕರ್ ಎಂದ ಫ್ಯಾನ್ಸ್

Krishnaveni K

ಶುಕ್ರವಾರ, 28 ಮಾರ್ಚ್ 2025 (16:56 IST)
ಚೆನ್ನೈ: ಐಪಿಎಲ್ 2025 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಮತ್ತೆ ಆರ್ ಸಿಬಿಯನ್ನು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಗೇಲಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರ್ ಸಿಬಿ ಫ್ಯಾನ್ಸ್ ನಂ.1 ಜೋಕರ್ ಎಂದಿದ್ದಾರೆ.

ಸಿಎಸ್ ಕೆ ಮಾಜಿ ಆಟಗಾರನಾಗಿರುವ ಅಂಬಟಿ ರಾಯುಡು ಕಳೆದ ವರ್ಷದಿಂದ ಆರ್ ಸಿಬಿ ವಿರುದ್ಧ ಹೇಳಿಕೆ ನೀಡುತ್ತಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಕಳೆದ ವರ್ಷ ಸಿಎಸ್ ಕೆ ವಿರುದ್ಧ ಗೆದ್ದಿದ್ದಕ್ಕೆ ಆರ್ ಸಿಬಿ ಸಂಭ್ರಮಿಸಿದ್ದನ್ನು ರಾಯುಡು ವ್ಯಂಗ್ಯ ಮಾಡಿದ್ದರು. ಮೊನ್ನೆ ಮೊನ್ನೆಯಷ್ಟೇ ಕಾಮೆಂಟರಿ ಮಾಡುವಾಗಲೂ ಆರ್ ಸಿಬಿಯನ್ನು ವ್ಯಂಗ್ಯ ಮಾಡಿದ್ದರು.

ಇದೀಗ ಮತ್ತೊಮ್ಮೆ ಗೇಲಿ ಮಾಡಿದ್ದಾರೆ. ಈ ಬಾರಿಯಾದರೂ ಆರ್ ಸಿಬಿ ಕಪ್ ಗೆಲ್ಲುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ‘ಆರ್ ಸಿಬಿ ಯಾವತ್ತಾದರೂ ಒಂದು ವರ್ಷ ಗೆಲ್ಲಬೇಕು. ಆದರೆ ಈ ವರ್ಷ ಅವರು ಗೆಲ್ಲುವುದು ಬೇಡ. ಈ ಬಾರಿ ಸಿಎಸ್ ಕೆ ಕಪ್ ಗೆಲ್ಲುತ್ತದೆ ಎಂದು ಭಾವಿಸುತ್ತೇನೆ. ಆರ್ ಸಿಬಿಯಂತಹ ತಂಡ ಐಪಿಎಲ್ ನಲ್ಲಿರಲೇಬೇಕು’ ಎಂದು ಜೋಕ್ ಮಾಡಿದ್ದಾರೆ.

ಅವರ ಈ ವ್ಯಂಗ್ಯಕ್ಕೆ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಈತ ಐಪಿಎಲ್ ನ ನಂ.1 ಜೋಕರ್ ಎಂದಿದ್ದಾರೆ. ಇಂತಹವರ ಬಾಯಿ ಮುಚ್ಚಿಸಲಾದರೂ ಆರ್ ಸಿಬಿ ಈ ಬಾರಿ ಕಪ್ ಗೆಲ್ಲಬೇಕು ಎಂದು ಫ್ಯಾನ್ಸ್ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ