IPL 2025: ಕೆಎಲ್ ರಾಹುಲ್, ರಿಷಭ್ ಪಂತ್, ಮೊಹಮ್ಮದ್ ಸಿರಾಜ್ ಬೆಲೆ ಇಷ್ಟು ಕೋಟಿಯಿಂದ ಸ್ಟಾರ್ಟ್

Krishnaveni K

ಬುಧವಾರ, 6 ನವೆಂಬರ್ 2024 (14:16 IST)
ಮುಂಬೈ: ಐಪಿಎಲ್ 2025 ರ ಮೆಗಾ ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನ ಬಾಕಿಯಿದ್ದು, ಲಕ್ನೋದಿಂದ ರಿಲೀಸ್ ಆಗಿರುವ ಕನ್ನಡಿಗ ಕೆಎಲ್ ರಾಹುಲ್, ಡೆಲ್ಲಿ ಕ್ಯಾಪ್ಟನ್ ಆಗಿದ್ದ ರಿಷಭ್ ಪಂತ್ ಮತ್ತು ಆರ್ ಸಿಬಿ ಬೌಲರ್ ಆಗಿದ್ದ ಮೊಹಮ್ಮದ್ ಸಿರಾಜ್ ಮೂಲ ಬೆಲೆ ಎಷ್ಟು ಎಂಬುದು ರಿವೀಲ್ ಆಗಿದೆ.

ನವಂಬರ್ 24 ಮತ್ತು 25 ರಂದು ಐಪಿಎಲ್ 2025 ರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಐಪಿಎಲ್ 2025 ರ ಹರಾಜಿನಲ್ಲಿ ಪಾಲ್ಗೊಳ್ಳಲು ಈ ಬಾರಿ ಭಾರತೀಯ ಆಟಗಾರರಲ್ಲೇ 400 ಕ್ಕೂ ಹೆಚ್ಚು ವಿದೇಶೀ ಆಟಗಾರರೂ ಹೆಸರು ನೊಂದಾಯಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದ ಇಂಗ್ಲೆಂಡ್ ಮಾಜಿ ವೇಗಿ ಜೇಮ್ಸ್ ಆಂಡರ್ಸನ್ ಕೂಡಾ ಇದೇ ಮೊದಲ ಬಾರಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಈ ನಡುವೆ ಭಾರತದ ಪ್ರಮುಖ ಆಟಗಾರರ ಪೈಕಿ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಮೊಹಮ್ಮದ್ ಸಿರಾಜ್ ರ ಬೇಸ್ ಪ್ರೈಸ್ ರಿವೀಲ್ ಆಗಿದೆ. ಈ ಮೂವರೂ ಆಟಗಾರರ ಮೂಲ ಬೆಲೆ 2 ಕೋಟಿ ರೂ.ಗಳಾಗಿರುತ್ತದೆ. ಕೆಎಲ್ ರಾಹುಲ್ ಈ ಮೊದಲು ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾಗ 17 ಕೋಟಿ ರೂ. ಸಂಭಾವನೆ ಪಡೆದಿದ್ದರು. ಇದೀಗ ಹರಾಜಿನಲ್ಲಿ ಎಷ್ಟು ಕೋಟಿ ರೂ.ಗೆ ಬಿಕರಿಯಾಗಲಿದ್ದಾರೆ ನೋಡಬೇಕಿದೆ.

ಇನ್ನು, ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 16 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರೆ ಆರ್ ಸಿಬಿ ಬೌಲರ್ ಆಗಿದ್ದ ಮೊಹಮ್ಮದ್ ಸಿರಾಜ್ 7 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಈ ಮೂವರೂ ಸ್ಟಾರ್ ಆಟಗಾರರ ಪೈಕಿ ಯಾರು ಯಾವ ತಂಡ ಸೇರಿಕೊಳ್ಳಲಿದ್ದಾರೆ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ