ಬೆಂಗಳೂರು: 2025ರ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟಕ್ಕೆ ಮತ್ತೆ ರೆಕ್ಕೆ ಪುಕ್ಕಗಳು ಬಂದಿವೆ. ಇದರ ಬೆನ್ನಲ್ಲೇ ಸೀರಂ ಇನ್ ಸ್ಟಿಟ್ಯೂಟ್ ಸಿಇಒ ಆದಾರ್ ಪೂನಾವಾಲ ಅವರ ಪೋಸ್ಟ್ ಕುತೂಹಲಕ್ಕೆ ಕಾರಣವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪೂನಾವಾಲ ಖರೀದಿಸಲಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಕೇಳಿಬರುತ್ತಿದೆ. ಎರಡು ದಿನಗಳ ಹಿಂದಷ್ಟೇ ಫ್ರಾಂಚೈಸಿ ಮಾರಾಟದ ಬಗ್ಗೆ ಊಹಾಪೋಹ ಕೇಳಿಬಂದಿತ್ತು.
ಡಯಾಜಿಯೊ ನಿಯಂತ್ರಿತ ಆರ್‌ಸಿಬಿ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ ಒಡೆತನದ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಪಾಲನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಎಕ್ಸ್‌ನಲ್ಲಿ ಸರಿಯಾದ ಮೌಲ್ಯಮಾಪನದಲ್ಲಿ, ಆರ್‌ಸಿಬಿ ಒಂದು ಉತ್ತಮ ತಂಡ... ಎಂದು ಬರೆದಿದ್ದಾರೆ. ಹೀಗಾಗಿ ಅವರು ಆರ್‌ಸಿಬಿ ಖರೀದಿ ಮಾಡುವ ರೇಸ್‌ನಲ್ಲಿರುವುದು ಖಚಿತವಾದಂತಿದೆ.
ಪೂನವಾಲಾ ಅವರು ಆರ್‌ಸಿಬಿ ಫ್ರಾಂಚೈಸಿ ಅನ್ನು ಖರೀದಿಸಲು ಆಸಕ್ತಿ ಹೊಂದಿರುವ ಇತರರಿಗಿಂತ ಮುಂಚೂಣಿಯಲ್ಲಿದ್ದಾರೆ. ಸುಮಾರು 52 ಬಿಲಿಯನ್ ಅಥವಾ 17,762 ಕೋಟಿ ಮೌಲ್ಯಕ್ಕೆ ಆರ್‌ಸಿಬಿ ಫ್ರಾಂಚೈಸಿ ಮಾರಾಟವಾಗಲಿದೆ ಎನ್ನಲಾಗುತ್ತಿದೆ.
ಐಪಿಎಲ್ ಪ್ರಶಸ್ತಿ ಜಯಸಿದ್ದ ಆರ್‌ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಸಾವಿಗೀಡಾಗಿದ್ದರು. ಹಲವರು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಮುಂಬೈ ಶೇರು ವಿನಿಮಯ ಕೇಂದ್ರವು ಆರ್‌ಸಿಬಿಯ ಮಾಲೀಕತ್ವದ ಸಂಸ್ಥೆ ಡಿಯಾಜಿಯೊದಿಂದ ಸ್ಪಷ್ಟನೆ ಕೇಳಿತ್ತು. ಆಗ ಪ್ರತಿಕ್ರಿಯಿಸಿದ್ದ ಸಂಸ್ಥೆಯು ಮಾರಾಟ ಕುರಿತ ವದಂತಿಗಳನ್ನು ತಳ್ಳಿ ಹಾಕಿತ್ತು