IPL 2025: ಐಪಿಎಲ್ ಪ್ರೇಮಿಗಳಿಗೆ ಇಂದು ಆರ್ ಸಿಬಿ, ಮುಂಬೈ ಇಂಡಿಯನ್ಸ್ ಜಿದ್ದಾಜಿದ್ದಿನ ಪಂದ್ಯದ ಮಜಾ

Krishnaveni K

ಸೋಮವಾರ, 7 ಏಪ್ರಿಲ್ 2025 (08:47 IST)
ಮುಂಬೈ: ಐಪಿಎಲ್ ಪ್ರೇಮಿಗಳಿಗೆ ಇಂದು ನಿಜಕ್ಕೂ ಬಾಯಲ್ಲಿ ನೀರೂರಿಸುವಂತಹ ಪಂದ್ಯ. ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಜಿದ್ದಾಜಿದ್ದಿನ ಪಂದ್ಯ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಕಳೆದ ಪಂದ್ಯವನ್ನು ಸೋತಿದೆ. ಎಲ್ಲಾ ತಂಡಗಳೂ ತವರಿನಲ್ಲಿ ಹುಲಿಗಳಾದರೆ ಆರ್ ಸಿಬಿ ಮಾತ್ರ ಉಲ್ಟಾ.

 ಈ ಪಂದ್ಯ ತವರಿನ ಹೊರಗೆ ಅಂದರೆ ಮುಂಬೈನಲ್ಲಿ ನಡೆಯುವುದರಿಂದ ಗೆಲ್ಲಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು. ಹಾಗೆ ನೋಡಿದರೆ ಆರ್ ಸಿಬಿ ಈ ಕೂಟದಲ್ಲಿ ಬಲಿಷ್ಠ ತಂಡವೇ ಆಗಿದೆ. ಬ್ಯಾಟಿಂಗ್, ಬೌಲಿಂಗ್, ಆಲ್ ರೌಂಡರ್ ಪಡೆಯನ್ನೇ ಹೊಂದಿದೆ.

ಇನ್ನು, ಮುಂಬೈ ಇಂಡಿಯನ್ಸ್ ಸತತ ವೈಫಲ್ಯದಿಂದ ಸಂಕಷ್ಟದಲ್ಲಿದೆ. ಕಳೆದ ಪಂದ್ಯವನ್ನು ಗೆಲ್ಲುವ ಅವಕಾಶವಿದ್ದರೂ ಹಾರ್ದಿಕ್ ಪಡೆ ಸೋತು ನಿರಾಸೆ ಅನುಭವಿಸಿದೆ. ಕಳೆದ ಎರಡು ಆವೃತ್ತಿಗಳಿಂದ ಪಾಂಡ್ಯ ನಾಯಕರಾದ ಮೇಲೆ ಮುಂಬೈ ಪಡೆ ಎಂದಿನಂತೆ ಬಲಿಷ್ಠವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಂದು ಅಭಿಮಾನಿಗಳಿಗೆ ರೋಹಿತ್-ಕೊಹ್ಲಿಯನ್ನು ಎದುರಾಳಿಗಳಾಗಿ ಮೈದಾನದಲ್ಲಿ ನೋಡುವ ತವಕವಿದೆ. ಕಳೆದ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದ ರೋಹಿತ್ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರರ ವೀಕ್ಷಿಸಬಹುದಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ