39 ವರ್ಷದ ಹಳೆ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ: ಆಸೀಸ್ ಮೇಲೆ ಟೀಂ ಇಂಡಿಯಾ ಸವಾರಿ

ಶುಕ್ರವಾರ, 28 ಡಿಸೆಂಬರ್ 2018 (09:56 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೇಲೆ ಟೀಂ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿದೆ.


ಮೂರನೇ ದಿನ ಚಹಾ ವಿರಾಮದ ವೇಳೆಗೆ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತದ ಮೊದಲ ಇನಿಂಗ್ಸ್ ಮೊತ್ತವಾದ 443 ರನ್ ಗಳನ್ನು ದಾಟಲು ಆಸೀಸ್ ಇನ್ನೂ 298 ರನ್ ಮಾಡಬೇಕಿದೆ.

ಭಾರತದ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಉತ್ತಮ ದಾಳಿ ಸಂಘಟಿಸಿ ಕ್ರಮವಾಗಿ 3, 1 ಮತ್ತು 2 ವಿಕೆಟ್ ಕಬಳಿಸಿದ್ದಾರೆ. ಇವರ ಪೈಕಿ ಬುಮ್ರಾ ಬೆಳಗಿನ ಅವಧಿಯಲ್ಲಿ ಪರಿಣಾಮಕಾರಿಯಾಗಿದ್ದರೆ ಶಮಿ ಮತ್ತು ಜಡೇಜಾ ದ್ವಿತೀಯಾರ್ಧದಲ್ಲಿ ಮಾರಕವಾಗಿದ್ದಾರೆ.

ಇದೇ ಸಂದರ್ಭದಲ್ಲಿ ಬುಮ್ರಾ 39 ವರ್ಷದ ಹಳೆಯ ದಾಖಲೆಯೊಂದನ್ನು ಮುರಿದರು. ಇದೇ ವರ್ಷ ಬುಮ್ರಾ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು. ಪದಾರ್ಪಣೆ ಮಾಡಿದ ವರ್ಷವೇ ಅತೀ ಹೆಚ್ಚು ವಿಕೆಟ್ ಗಳಿಸಿದ್ದ ದಿಲೀಪ್ ಜೋಶಿ (40 ವಿಕೆಟ್) ಯವರ ಭಾರತೀಯ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ. ಬುಮ್ರಾ ಈ ವರ್ಷ ಒಟ್ಟು 41 ವಿಕೆಟ್ ಗಳಿಸಿದ್ದಾರೆ.

ಇವರ ಮಾರಕ ದಾಳಿಯಿಂದಾಗಿ ಆಸೀಸ್ ನ ಯಾವ ಬ್ಯಾಟ್ಸ್ ಮನ್ ಗಳೂ 25 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಆಸೀಸ್ ಬ್ಯಾಟಿಂಗ್ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದು ನೀವು ಲೆಕ್ಕಹಾಕಬಹುದು. ಸದ್ಯಕ್ಕೆ ನಾಯಕ ಟಿಮ್ ಪೇಯ್ನ್ 22 ರನ್ ಮತ್ತು 5 ರನ್ ಗಳಿಸಿರುವ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ