ಕರಾಚಿ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ತೆರಳುವುದು ಅನಿಶ್ಚಿತತೆಯಲ್ಲಿರುವಾಗಲೇ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿ ಆಹ್ವಾನಿಸಿದ್ದಾರೆ.
2025 ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನೀಡುವುದು ಅನುಮಾನ. ಆದರೆ ಭಾರತ ತೆರಳದೇ ಇದ್ದರೆ ಪಾಕಿಸ್ತಾನಕ್ಕೆ ದೊಡ್ಡ ನಷ್ಟವಾಗಲಿದೆ. ಇದರ ನಡುವೆ ಜಾವೇದ್ ಮಿಯಾಂದಾದ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಸಾವು ಎನ್ನುವುದು ನಿಶ್ಚಿತ. ಸಾವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಬರಬಹುದು. ಆದರೆ ಸಾವಿಗೆ ಹೆದರಿ ಪಾಕಿಸ್ತಾನಕ್ಕೆ ಬರದೇ ಇರಬೇಡಿ. ಭಾರತ ತಂಡ ಪಾಕಿಸ್ತಾನಕ್ಕೆ ಬರಲು ಹೆದರಬೇಕಾಗಿಲ್ಲ ಎಂಬ ಮಿಯಾಂದಾದ್ ಹೇಳಿಕೆ ವೈರಲ್ ಆಗಿದೆ. ಅವರ ಈ ಹೇಳಿಕೆ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದೇನು ಆಹ್ವಾನವೋ, ಸಾವಿನ ಎಚ್ಚರಿಕೆಯೋ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಯಾವುದಾದರೂ ಒಂದು ತಂಡವನ್ನು ತಮ್ಮ ದೇಶಕ್ಕೆ ಆಹ್ವಾನಿಸುವ ಪರಿ ಇದೇನಾ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಒಂದು ವೇಳೆ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸದೇ ಇದ್ದರೆ ಪಾಕಿಸ್ತಾನ ಜೊತೆಗೆ ಶ್ರೀಲಂಕಾ, ಯುಎಇನಲ್ಲೂ ಪಂದ್ಯಗಳು ನಡೆಯಬಹುದು.