ಕೆಎಲ್ ರಾಹುಲ್ ಸಲಹೆಯಿಂದ ಟೀಂ ಇಂಡಿಯಾ ಕೋಚ್ ಹುದ್ದೆಗೆ ಸ್ಪರ್ಧಿಸದಿರಲು ತೀರ್ಮಾನಿಸಿದ ಜಸ್ಟಿನ್ ಲ್ಯಾಂಗರ್

Krishnaveni K

ಶುಕ್ರವಾರ, 24 ಮೇ 2024 (12:40 IST)
Photo Courtesy: Twitter
ಮುಂಬೈ: ರಾಹುಲ್ ದ್ರಾವಿಡ್ ರಿಂದ ತೆರವಾದ ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಈಗಾಗಲೇ ಹಲವು ಹೆಸರುಗಳು ಕೇಳಿಬರುತ್ತಿವೆ. ಕೆಲವು ದಿನಗಳ ಮೊದಲು ಲಕ್ನೋ ಸೂಪರ್ ಜೈಂಟ್ಸ್ ಕೋಚ್, ಆಸ್ಟ್ರೇಲಿಯಾ ಮೂಲದ ಜಸ್ಟಿನ್ ಲ್ಯಾಂಗರ್ ಹೆಸರು ಕೇಳಿಬರುತ್ತಿತ್ತು.

ಆದರೆ ಲ್ಯಾಂಗರ್ ಸ್ಪರ್ಧಿಸದೇ ಇರಲು ತೀರ್ಮಾನಿಸಿದ್ದಾರಂತೆ. ಇದಕ್ಕೆ ಕಾರಣ ಕೆಎಲ್ ರಾಹುಲ್ ನೀಡಿದ ಸಲಹೆ ಕಾರಣ ಎಂದು ಸ್ವತಃ ಲ್ಯಾಂಗರ್ ಬಹಿರಂಗಪಡಿಸಿದ್ದಾರೆ. ಅವರ ಈ ಹೇಳಿಕೆ ಈಗ ಸಂಚಲನ ಮೂಡಿಸಿದೆ. ಕೆಎಲ್ ರಾಹುಲ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯೂ ಇದೆ.

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಲು ಯೋಚಿಸಿದ್ದೆ. ಈ ಬಗ್ಗೆ ಕೆಎಲ್ ರಾಹುಲ್ ಬಳಿ ಚರ್ಚಿಸಿದೆ. ಆಗ ಅವರು ‘ನಿಮಗೆ ಐಪಿಎಲ್ ನಲ್ಲಿ ಒಂದು ಫ‍್ರಾಂಚೈಸಿ ಪರ ಕೋಚ್ ಆಗಿ ಕೆಲಸ ಮಾಡಲು ಎಷ್ಟು ಒತ್ತಡವಿರುತ್ತದೋ, ಟೀಂ ಇಂಡಿಯಾ ಕೋಚ್ ಆದರೆ ಅದರ ಸಾವಿರಪಟ್ಟು ರಾಜಕೀಯ ಒತ್ತಡಗಳಿರುತ್ತವೆ’ ಎಂದು ಹೇಳಿದರು. ಅವರು ಆ ರೀತಿ ಹೇಳಿದ ಮೇಲೆ ನಾನು ಅರ್ಜಿ ಹಾಕುವುದು ಬೇಡ ಎಂದು ತೀರ್ಮಾನಿಸಿದೆ ಎಂದಿದ್ದಾರೆ.

ರಾಹುಲ್ ಸಲಹೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಮೂಲಕ ಬಿಸಿಸಿಐನಲ್ಲಿ ಮತ್ತು ಟೀಂ ಇಂಡಿಯಾ ಆಯ್ಕೆ ವಿಚಾರದಲ್ಲಿ ರಾಜಕೀಯ ಒತ್ತಡವಿರುತ್ತದೆ ಎಂದು ರಾಹುಲ್ ಪರೋಕ್ಷವಾಗಿ ಹೇಳಿದಂತಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ