ಧೋನಿಯನ್ನೇ ನಾಯಕತ್ವದಿಂದ ಕಿತ್ತುಹಾಕಿದ್ದ ಸಂಜೀವ್ ಗೊಯೆಂಕಾ ಹಿನ್ನಲೆ ತಿಳಿಯಿರಿ

Krishnaveni K

ಶುಕ್ರವಾರ, 10 ಮೇ 2024 (08:38 IST)
ಲಕ್ನೋ: ಐಪಿಎಲ್ ನಲ್ಲಿ ಪ್ರಸಕ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲಿಕರಾಗಿರುವ ಸಂಜೀವ್ ಗೊಯೆಂಕಾ ನಾಯಕ ಕೆಎಲ್ ರಾಹುಲ್ ಜೊತೆಗಿನ ಕಿತ್ತಾಟದಿಂದ ಸುದ್ದಿಯಾಗಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲಿನ ಬಳಿಕ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಸಿಟ್ಟುಗೊಂಡು ನಾಯಕ ಕೆಎಲ್ ರಾಹುಲ್ ಜೊತೆಗೆ ಮೈದಾನದಲ್ಲೇ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಸಂಜೀವ್ ಗೊಯೆಂಕಾ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ.

ಸಂಜೀವ್ ಗೊಯೆಂಕಾ ಎಂದರೆ ಆಟಗಾರರ ಸ್ಟಾರ್ ಗಿರಿಯನ್ನೂ ನೋಡದೇ ನಿಷ್ಠುರವಾಗಿ ನಡೆದುಕೊಳ್ಳುವ ವ್ಯಕ್ತಿ ಎಂದೇ ಹೇಳಲಾಗುತ್ತದೆ. ಇದಕ್ಕೆ ಉದಾಹರಣೆ 2016 ರಲ್ಲಿ ಧೋನಿಯನ್ನೇ ನಾಯಕತ್ವದಿಂದ ಕಿತ್ತು ಹಾಕಿದ್ದು. ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಬ್ಯಾನ್ ಆದಾಗ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕರಾದರು.

ಆದರೆ ತಂಡದ ಪ್ರದರ್ಶನ ಚೆನ್ನಾಗಿರಲಿಲ್ಲವೆಂದು ತಂಡದ ಮಾಲಿಕರಾಗಿದ್ದ ಸಂಜೀವ್ ಗೊಯೆಂಕಾ ಮತ್ತು ಹರ್ಷ ಗೊಯೆಂಕಾ ಧೋನಿಯನ್ನೇ ಸೈಡ್ ಲೈನ್ ಮಾಡಿ ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟಕಟ್ಟಿದರು. ಧೋನಿಯನ್ನು ಕಡೆಗಣಿಸಿದ್ದಕ್ಕೆ ಸಂಜೀವ್ ಗೊಯೆಂಕಾ ವಿರುದ್ಧ ಸಾಕ್ಷಿ ಧೋನಿ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಂಗ್ಯಭರಿತ ಮೆಸೇಜ್ ಹಾಕಿದ್ದರು. ಆದರೆ ನನಗೆ ಧೋನಿ ಮೇಲೆ ಯಾವುದೇ ಅಸಮಾಧಾನಗಳಿಲ್ಲ ಎಂದು ಸಂಜೀವ್ ಗೊಯೆಂಕಾ ಬಳಿಕ ಹೇಳಿಕೆ ನೀಡಬೇಕಾಯಿತು.

ಇನ್ನು, ಕಳೆದ ವರ್ಷ ಆಗ ಲಕ್ನೋ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಮತ್ತು ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ನಡುವೆ ಮೈದಾನದಲ್ಲಿ ಘರ್ಷಣೆಯಾದಾಗ ತಮ್ಮ ತಂಡದ ಗಂಭೀರ್ ಪರ ವಹಿಸದೇ ಕೊಹ್ಲಿ ಜೊತೆಗೆ ಮಾತುಕತೆ ನಡೆಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.

ಇದೀಗ ಕೆಎಲ್ ರಾಹುಲ್ ಜೊತೆ ಬಹಿರಂಗವಾಗಿ ಕಿತ್ತಾಡಿ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆಟಗಾರರೆಂದರೆ ಸಂಜೀವ್ ಗೊಯೆಂಕಾಗೆ ಯಾವುದೇ ಗೌರವವಿಲ್ಲ. ಕ್ರಿಕೆಟ್ ನ್ನೂ ಬ್ಯುಸಿನೆಸ್ ನಂತೆ ನೋಡುತ್ತಾರೆ. ಆಟಗಾರರನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ ಎಂದು ಕೆಲವರು ಅವರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಬಹುಕೋಟಿ ಒಡೆಯರಾಗಿರುವ ಸಂಜೀವ್ ಗೊಯೆಂಕಾ ಉದ್ಯಮಿಯಾಗಿದ್ದು, ಆರ್ ಪಿಜಿಎಸ್ ಸಂಸ್ಥೆಯ ಒಡೆಯರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ