ಬೆಂಗಳೂರು: ಕರ್ನಾಟಕ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಕೆಎಲ್ ರಾಹುಲ್ ಕೂಡಾ ಒಬ್ಬರು. ಇಂದು ಅವರ 32 ನೇ ಜನ್ಮದಿನ. ಈ ವಿಶೇಷ ದಿನದಂದು ಅವರ ಜೀವನದ ಇಂಟ್ರೆಸ್ಟಿಂಗ್ ವಿಚಾರಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಕೆಎಲ್ ರಾಹುಲ್ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ಆದರೆ ಅವರ ಪೋಷಕರು ಮಂಗಳೂರು ಮೂಲದವರು. ಅವರ ತಂದೆ ಎನ್ ಐಟಿಕೆಯಲ್ಲಿ ಪ್ರೊಫೆಸರ್ ಮತ್ತು ನಿರ್ದೇಶಕರಾಗಿದ್ದರು. ಅವರ ತಾಯಿ ಕೂಡಾ ಮಂಗಳೂರು ಯೂನಿವರ್ಸಿಟಿಯಲ್ಲಿ ಪ್ರೊಫೆಸರಾಗಿ ಕೆಲಸ ಮಾಡುತ್ತಿದ್ದರು.
ಕಾರಣಾಂತರಗಳಿಂದ ರಾಹುಲ್ ಪೋಷಕರು ಬೆಂಗಳೂರಿಗೆ ಶಿಫ್ಟ್ ಆದರು. ತಾವಿಬ್ಬರೂ ಶಿಕ್ಷಣ ವೃತ್ತಿಯಲ್ಲಿ ಹೆಸರು ಮಾಡಿದವರಾಗಿದ್ದರಿಂದ ರಾಹುಲ್ ತಂದೆ-ತಾಯಿಗೂ ಮಗ ಓದಿ ದೊಡ್ಡ ಕೆಲಸಕ್ಕೆ ಸೇರಿಕೊಳ್ಳಲಿ ಎಂಬ ಆಸೆಯಿತ್ತಂತೆ. ಆದರೆ ಮಗ ಕ್ರಿಕೆಟ್ ನಲ್ಲಿ ಆಸಕ್ತಿ ತೋರಿಸಿದಾಗ ಪ್ರೋತ್ಸಾಹಿಸಿದ್ದರು.
ರಾಹುಲ್ ತಂದೆ ಲೋಕೇಶ್ ಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಎಂದರೆ ಅಭಿಮಾನವಿತ್ತು. ಹೀಗಾಗಿ ಗವಾಸ್ಕರ್ ಮೇಲಿನ ಅಭಿಮಾನದಿಂದ ಅವರಂತೇ ತನ್ನ ಮಗನಿಗೂ ಗವಾಸ್ಕರ್ ಮಗನ ಹೆಸರನ್ನೇ ಇಡಲು ನಿರ್ಧರಿಸಿದ್ದರು. ಆದರೆ ಗವಾಸ್ಕರ್ ಪುತ್ರ ರೋಹನ್ ಹೆಸರನ್ನು ರಾಹುಲ್ ಎಂದು ತಪ್ಪಾಗಿ ತಿಳಿದು ರಾಹುಲ್ ಎಂದು ಹೆಸರಿಟ್ಟಿದ್ದರಂತೆ.
ಅದೇನೇ ಇರಲಿ, ರಾಹುಲ್ ಈಗ ಕೆಎಲ್ ರಾಹುಲ್ ಆಗಿ ಜಾಗತಿಕ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿದ್ದಾರೆ. ತಂದೆ-ತಾಯಿ ಮಂಗಳೂರು ಮೂಲದವರಾಗಿರುವುದರಿಂದ ರಾಹುಲ್ ಗೂ ತುಳು ಭಾಷೆ ಮೇಲೆ ಹಿಡಿತವಿದೆ. ವಿಶೇಷವೆಂದರೆ ಈಗ ಅವರು ಮದುವೆಯಾಗಿರುವುದೂ ಮಂಗಳೂರು ಮೂಲದ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿಯನ್ನು. ಸಮಯ ಸಿಕ್ಕಾಗಲೆಲ್ಲಾ ರಾಹುಲ್ ಮಂಗಳೂರಿಗೆ ಭೇಟಿ ನೀಡುತ್ತಿರುತ್ತಾರೆ.
ಕೆಎಲ್ ರಾಹುಲ್ 2014 ರಲ್ಲಿ ಮೆಲ್ಬರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ರೋಹಿತ್ ಶರ್ಮಾ ಸ್ಥಾನದಲ್ಲಿ ಅವರು ತಂಡದಲ್ಲಿ ಸ್ಥಾನ ಪಡೆದಿದ್ದರು. ಧೋನಿ ಕೈಯಿಂದ ಮೊದಲು ಕ್ಯಾಪ್ ಪಡೆದಿದ್ದರು. ಇದೀಗ ಟೀಂ ಇಂಡಿಯಾ ಪರ 50 ಟೆಸ್ಟ್, 75 ಏಕದಿನ ಮತ್ತು 72 ಟಿ20 ಪಂದ್ಯಗಳನ್ನಾಡಿದ್ದಾರೆ.