ಧೋನಿ ಇದ್ದಾಗ ಮಿಂಚುತ್ತಿದ್ದ ಕುಲ್-ಚಾ ಜೋಡಿಗೆ ಈಗೇನಾಗಿ ಹೋಯ್ತು?
ಭಾನುವಾರ, 28 ಮಾರ್ಚ್ 2021 (10:02 IST)
ಪುಣೆ: ಇತ್ತೀಚೆಗೆ ಟೀಂ ಇಂಡಿಯಾ ಬೌಲರ್ ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್ ಗಳ ಕಳಪೆ ಫಾರ್ಮ್ ನಿಂದಾಗಿ ಸೀಮಿತ ಓವರ್ ಗಳ ಪಂದ್ಯದಲ್ಲಿ ಸಂಕಷ್ಟ ಅನುಭವಿಸುತ್ತಿದೆ.
ಕುಲ್-ಚಾ ಎಂದೇ ಖ್ಯಾತರಾಗಿರುವ ಈ ಜೋಡಿ ಒಟ್ಟಿಗೇ ಪಂದ್ಯದಲ್ಲಿ ಕಾಣಿಸಿಕೊಳ್ಳದೇ ಎಷ್ಟೋ ದಿನಗಳೇ ಆಗಿವೆ. ಆದರೆ ಒಬ್ಬರಲ್ಲಾ ಒಬ್ಬರು ತಂಡದಲ್ಲಿ ಅವಕಾಶ ಪಡೆದರೂ ಇಬ್ಬರಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿಲ್ಲ.
ಧೋನಿ ನಾಯಕರಾಗಿದ್ದಾಗ ಮತ್ತು ವಿಕೆಟ್ ಕೀಪರ್ ಆಗಿ ವಿಕೆಟ್ ಹಿಂದುಗಡೆಯಿದ್ದಾಗ ಇಬ್ಬರೂ ಬೌಲರ್ ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಯಾಕೆಂದರೆ ಸ್ಪಿನ್ನರ್ ಗಳಿಗೆ ಧೋನಿ ಯಾವ ರೀತಿ ಬಾಲ್ ಮಾಡಬೇಕೆಂದು ಸರಿಯಾಗಿ ಮಾರ್ಗದರ್ಶನ ನೀಡುತ್ತಿದ್ದರು. ಇಬ್ಬರೂ ಇದರ ಲಾಭವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದರು.
ಆದರೆ ಈಗ ಧೋನಿಯಿಲ್ಲ. ಇಬ್ಬರ ಪ್ರದರ್ಶನವೂ ಕಳೆಗುಂದಿದೆ. ಧೋನಿ ಮೈದಾನದಲ್ಲಿದ್ದಾಗ ಕುಲದೀಪ್ ಯಾದವ್ ಒಟ್ಟು 47 ಪಂದ್ಯಗಳಿಂದ 91 ವಿಕೆಟ್ ಕಬಳಿಸಿದ್ದರು. ಆದರೆ ಈಗ ಧೋನಿಯಲ್ಲದೇ 16 ಪಂದ್ಯಗಳಿಂದ ಕೇವಲ 14 ವಿಕೆಟ್ ಪಡೆದಿದ್ದಾರೆ. ಅತ್ತ ಚಾಹಲ್ ಕೂಡಾ ಧೋನಿ ಇದ್ದಾಗ 46 ಪಂದ್ಯಗಳಿಂದ 81 ವಿಕೆಟ್ ಪಡೆದಿದ್ದರು. ಆದರೆ ಧೋನಿಯಿಲ್ಲದೇ ಹೋದಾಗ 8 ಪಂದ್ಯಗಳಿಂದ ಕೇವಲ 11 ವಿಕೆಟ್ ಪಡೆದಿದ್ದಾರೆ. ಪ್ರತಿಭಾವಂತ ಸ್ಪಿನ್ ಜೋಡಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಕಾಡುತ್ತಿರಬಹುದು. ಇವರನ್ನು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಬೆಂಬಲಿಸಬೇಕಿದೆ ಎಂದು ಅಭಿಮಾನಿಗಳೂ ಅಭಿಪ್ರಾಯಪಡುತ್ತಿದ್ದಾರೆ.