ಅಗರ್ತಲಾ: ವಿಮಾನ ಪ್ರಯಾಣ ವೇಳೆ ನೀರು ಕುಡಿದ ಬಳಿಕ ಅಸ್ವಸ್ಥರಾಗಿದ್ದ ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಆರೋಗ್ಯದ ಬಗ್ಗೆ ಲೇಟೆಸ್ಟ್ ಅಪ್ ಡೇಟ್ ಸಿಕ್ಕಿದೆ.
ಮಯಾಂಕ್ ಅಗರ್ವಾಲ್ ರನ್ನು ಅಗರ್ತಲಾದ ಐಎಲ್ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಮಯಾಂಕ್ ಸುಧಾರಿಸುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ‍್ಯತೆಯಿದೆ.
ಶುಕ್ರವಾರ ರೈಲ್ವೇಸ್ ತಂಡದ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಭಾಗಿಯಾಗಲು ಸೂರತ್ ವಿಮಾನ ಪ್ರಯಾಣ ಮಾಡುವಾಗ ನೀರು ಕುಡಿದ ನಂತರ ಮಯಾಂಕ್ ಅಸ್ವಸ್ಥರಾಗಿದ್ದರು. ತೀವ್ರ ವಾಂತಿ ಮತ್ತು ಗಂಟಲಲ್ಲಿ ಉರಿ ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಯಾಂಕ್ ಆರೋಗ್ಯದ ಬಗ್ಗೆ ಅಭಿಮಾನಿಗಳೂ ಆತಂಕಿತರಾಗಿದ್ದರು. ಇದೀಗ ಮಯಾಂಕ್ ಸ್ಥಿತಿ ಸುಧಾರಿಸಿಕೊಳ್ಳುತ್ತಿದೆ ಎಂಬ ಸುದ್ದಿ ಅಭಿಮಾನಿಗಳಿಗೆ ನೆಮ್ಮದಿ ನೀಡಿದೆ. ಈಗಲೂ ವೈದ್ಯರು ಅವರನ್ನು ನಿಗಾದಲ್ಲಿರಿಸಿದ್ದಾರೆ. ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ.
ಹೆಲ್ತ್ ಬುಲೆಟಿನಲ್ಲಿ ಏನಿದೆ?
ಆಸ್ಪತ್ರೆ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಗಂಟಲ್ಲಿ ಕಿರಿ ಕಿರಿ ಅನುಭವ ಹಾಗೂ ತುಟಿಯ ಮೇಲೆ ಗುಳ್ಳೆಗಳು ಎದ್ದಿರುವುದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಆರೋಗ್ಯ ಇದೀಗ ಸ್ಥಿರವಾಗಿದೆ ಎಂದಿದೆ.
ಮುಂದಿನ ರಣಜಿ ಪಂದ್ಯಕ್ಕೆ ಅಲಭ್ಯ
ತೀವ್ರ ಅಸ್ವಸ್ಥರಾಗಿರುವ ಮಯಾಂಕ್ ಅಗರ್ವಾಲ್ ಚೇತರಿಸಿಕೊಂಡು ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾದರೂ ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಉಳಿದ ಆಟಗಾರರು ರಾಜ್ ಕೋಟ್ ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ. ಮಯಾಂಕ್ ಜೊತೆಗೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ಮತ್ತು ತ್ರಿಪುರಾ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಇದ್ದಾರೆ.