ಪಾಕಿಸ್ತಾನದ ಹೊಸ ಹೆಡ್ ಕೋಚ್ ಮಿಕಿ ಆರ್ಥರ್ ಗುರುವಾರ ತಮ್ಮ ಹೊಸ ತಂಡವನ್ನು ವಿಶ್ವ ಕ್ರಿಕೆಟ್ ಕ್ರಮಾಂಕದಲ್ಲಿ ಟಾಪ್ ಸ್ಥಾನಕ್ಕೆ ಒಯ್ಯುವುದಾಗಿ ಶಪಥ ತೊಟ್ಟಿದ್ದಾರೆ. ತಮ್ಮ ಹೊಸ ಪಾತ್ರವನ್ನು ವಹಿಸಿಕೊಳ್ಳಲು ಬುಧವಾರ ರಾತ್ರಿ ಅವರು ಲಾಹೋರ್‌ಗೆ ಆಗಮಿಸಿದ್ದಾರೆ. ಪಾಕಿಸ್ತಾನವು ವಿಶ್ವ ಟ್ವೆಂಟಿ 20ಯಿಂದ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಬಳಿಕ ವಾಖರ್ ಯೂನಿಸ್ ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ನೀಡಿದಾಗಿನಿಂದ ಈ ಹುದ್ದೆ ಖಾಲಿಯಾಗಿತ್ತು.
ಪಾಕಿಸ್ತಾನವು ಪ್ರಸಕ್ತ ಟೆಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದು, ಸೀಮಿತ ಓವರುಗಳಲ್ಲಿ ಕ್ರಿಕೆಟ್‌ನಲ್ಲಿ ಅದರ ಸ್ಥಾನ ಕೆಳಮಟ್ಟದಲ್ಲಿದ್ದು, ಏಕ ದಿನ ಪಂದ್ಯಗಳಲ್ಲಿ 9ನೇ ಸ್ಥಾನ ಮತ್ತು ಟ್ವೆಂಟಿ 20ಯಲ್ಲಿ ಏಳನೇ ಸ್ಥಾನದಲ್ಲಿದ್ದು, ಹೆಚ್ಚಿನ ಸುಧಾರಣೆಯಾಗಬೇಕಾಗಿದೆ.
48 ವರ್ಷದ ಆರ್ಥರ್ 2005-2010ರವರೆಗೆ ದಕ್ಷಿಣ ಆಫ್ರಿಕಾ ಜತೆ ಅಮೋಘ ಕೋಚಿಂಗ್ ವೃತ್ತಿಜೀವನ ಮುಗಿಸಿದ್ದು, 2008ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಸರಣಿ ಜಯದ ಬಳಿಕ ಟೆಸ್ಟ್ ಕ್ರಮಾಂಕದ ಶೃಂಗಕ್ಕೆ ದಕ್ಷಿಣ ಆಫ್ರಿಕಾವನ್ನು ಒಯ್ದಿದ್ದರು. 2007ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಒಂದನೇ ನಂಬರ್ ಸ್ಥಾನಕ್ಕೆ ದಕ್ಷಿಣ ಆಫ್ರಿಕಾವನ್ನು ಏರಿಸಿದ್ದರು.