ಮುಂಬೈ: ಇದೇ 22ರಂದು ಐಪಿಎಲ್ ಕ್ರಿಕೆಟ್ ಹಬ್ಬ ಆರಂಭವಾಗಲಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಆರು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆ ಆಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡದ ಆಟಗಾರರನ್ನು ಗಾಯದ ಸಮಸ್ಯೆ ಕಾಡುತ್ತಿದೆ.
ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದ ಲಿಜಾದ್ ವಿಲಿಯಮ್ಸ್ ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆಲ್‌ರೌಂಡರ್ ಲಿಜಾದ್ ಅವರನ್ನು ಮುಂಬೈ ತಂಡವು ಹರಾಜಿನಲ್ಲಿ ₹ 75 ಲಕ್ಷಕ್ಕೆ ಖರೀದಿಸಿತ್ತು. ಈಗ ಮುಂಬೈ ಇಂಡಿಯನ್ಸ್ ತಂಡ ತನ್ನ ಬದಲಿ ಆಟಗಾರರನ್ನು ಘೋಷಣೆ ಮಾಡಿದೆ. ಇದರಿಂದ ತಂಡಕ್ಕೆ ಆನೆ ಬಲ ಬಂದಿದೆ.
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ 30 ವರ್ಷದ ಕಾರ್ಬಿನ್ ಬಾಷ್ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು 2014ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದ ದಕ್ಷಿಣ ಆಫ್ರಿಕಾ ತಂಡದಲ್ಲಿ ಮಿಂಚು ಹರಿಸಿದ್ದರು. ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು 15ಕ್ಕೆ 4 ವಿಕೆಟ್ ಪಡೆದು ಮೋಡಿ ಮಾಡಿ, ಪಂದ್ಯದ ಆಟಗಾರನಾಗಿ ಹೊರಹೊಮ್ಮಿದ್ದರು. ಬಲಗೈ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಳ್ಳುವ ಕಾರ್ಬಿನ್ ಸ್ಥಿರ ಪ್ರದರ್ಶನ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ತಂಡಕ್ಕೆ ಪಾದಾರ್ಪಣೆ ಮಾಡಿರುವ ಈ ಆಟಗಾರ ಮುಂಬೈ ಇಂಡಿಯನ್ಸ್ ತಂಡಕ್ಕೂ ಲಗ್ಗೆಯಿಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಾಕಷ್ಟು ಆಲ್‌ರೌಂಡರ್‌ಗಳು ಇದ್ದಾರೆ. ಲಿಜಾದ್ ವಿಲಿಯಮ್ಸ್ ಬದಲಿಗೆ ಈ ತಂಡವನ್ನು ಸೇರಿದ 7ನೇ ಆಲ್‌ರೌಂಡರ್ ಎಂಬ ಹೆಗ್ಗಳಿಕೆಗೆ ಕಾರ್ಬಿನ್ ಪಾತ್ರರಾಗಿದ್ದಾರೆ. ಈ ತಂಡದಲ್ಲಿ ಈಗಾಗಲೇ ಹಾರ್ದಿಕ್ ಪಾಂಡ್ಯ ಸೇರಿದಂತೆ 6 ಆಲ್‌ರೌಂಡರ್‌ಗಳು ಇದ್ದಾರೆ.