ಮುಂಬೈ: ಬ್ಯಾಟರ್ ರಿಷಭ್ ಪಂತ್ ದಾಖಲೆಯ 27 ಕೋಟಿಗೆ ಹರಾಜಾಗುವ ಮೂಲಕ ಐಪಿಎಲ್ನಲ್ಲಿ ಗರಿಷ್ಠ ಮೌಲ್ಯ ಪಡೆದ ಆಟಗಾರ ದಾಖಲೆ ಬರೆದಿದ್ದರೆ, ಬಿಹಾರದ 13 ವರ್ಷದ ಪೋರ ಐಪಿಎಲ್ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.
ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದ ಬಾಲಕ ಈಗ ಬರೋಬ್ಬರಿ 1.10 ಕೋಟಿ ರೂಪಾಯಿ ಮೌಲ್ಯವನ್ನು ಪಡೆದಿದ್ದಾನೆ. ಈತನನ್ನು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದೆ. ಐಪಿಎಲ್ನ ಇತಿಹಾಸದಲ್ಲೇ ಹರಾಲ್ಲಿ ಬಿಕರಿಯಾದ ಅತಿ ಕಿರಿಯ ಆಟಗಾರನೆಂಬ ಖ್ಯಾತಿಗೆ ಈತ ಪಾತ್ರನಾಗಿದ್ದಾನೆ.
ಬಿಹಾರ ರಾಜ್ಯ ತಂಡದಲ್ಲಿ ಈಗಾಗಲೇ ಸ್ಥಾನ ಗಿಟ್ಟಿಸಿಕೊಂಡಿರುವ ಇನ್ನೂ ಮೀಸೆ ಮೂಡದ ಈ ಬಾಲಕ ಅಂಡರ್ 19 ಭಾರತ ತಂಡದ ಪರ 2 ಯೂತ್ ಟೆಸ್ಟ್ ಗಳನ್ನು ಆಡಿದ್ದಾನೆ. ಪ್ರಥಮ ದರ್ಜೆ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಸಾಧನೆಯನ್ನೂ ಮಾಡಿದ್ದಾನೆ.
ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ದಿಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಪೈಪೋಟಿಗೆ ಬಿದ್ದು ರಾಜಸ್ಥಾನ ತಂಡ ಈತನನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ನಾಲ್ಕನೇ ವಯಸ್ಸಿಗೆ ಬ್ಯಾಟ್ ಹಿಡಿದ ಈ ಪೋರ ಕಳೆದ ಜನವರಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ. ವೈಭವ್ ಇತ್ತೀಚೆಗೆ ಚೆನ್ನೈನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಅಂಡರ್ 19 ಯೂತ್ ಟೆಸ್ಟ್ ಪಂದ್ಯಗಳಲ್ಲಿ ಆಡಿ, ಪ್ರಥಮ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲಿ ಶತಕ ಗಳಿಸಿದ್ದ ಗಮನ ಸೆಳೆದಿದ್ದ.