ಏಕದಿನ ವಿಶ್ವಕಪ್ ಸೆಮಿಫೈನಲ್ ಇಂದು: ರಿಯಲ್ ಗೇಮ್ ಈಗ ಶುರು
ಟೀಂ ಇಂಡಿಯಾಗೆ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಾಗಿರುವುದರಿಂದ ಪ್ರತಿಷ್ಠೆಯ ಕಣವಾಗಿದೆ. ಜೊತೆಗೆ ಇದುವರೆಗೆ ನಡೆದ ಲೀಗ್ ಪಂದ್ಯಗಳಲ್ಲಿ ಸೋಲರಿಯದೇ ಬಂದಿದ್ದ ಭಾರತಕ್ಕೆ ಇನ್ನೆರಡು ಪಂದ್ಯಗಳಲ್ಲಿ ಗೆಲ್ಲುವ ಒತ್ತಡವಿದೆ. ಇದುವರೆಗೆ ನಡೆದ ವಿಶ್ವಕಪ್ ಗಳಲ್ಲಿ ಟೀಂ ಇಂಡಿಯಾ ಹಲವು ಬಾರಿ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿದ್ದು ಇದೆ. ಆದರೆ ಈ ಬಾರಿ ಭಾರತೀಯ ಆಟಗಾರರ ಫಾರ್ಮ್ ನೋಡಿದರೆ ಆ ರೀತಿ ಆಗದು ಎಂಬ ವಿಶ್ವಾಸ ಅಭಿಮಾನಿಗಳದ್ದು. ಇದುವರೆಗೆ ನಡೆದ ಪಂದ್ಯಗಳಲ್ಲಿ ಒಬ್ಬರಲ್ಲ ಒಬ್ಬರು ಸಂಕಷ್ಟದ ಸಮಯದಲ್ಲಿ ತಂಡದ ಕೈ ಹಿಡಿದಿದ್ದಾರೆ.
ಅತ್ತ ನ್ಯೂಜಿಲೆಂಡ್ ಸೆಮಿಫೈನಲ್ ಗೇರಿದ್ದು ಕಡಿಮೆ. ಆದರೆ ಕಳೆದ ಬಾರಿ ಏಕದಿನ ವಿಶ್ವಕಪ್ ನಲ್ಲು ಸೆಮಿಫೈನಲ್ ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾಗಿ ಕಿವೀಸ್ ಗೆಲುವು ಸಾಧಿಸಿತ್ತು. ಆ ಆತ್ಮವಿಶ್ವಾಸ ಕೇನ್ ವಿಲಿಯಮ್ಸನ್ ಪಡೆಗಿದೆ. ನ್ಯೂಜಿಲೆಂಡ್ ವಿಶ್ವಕಪ್ ಗಳಲ್ಲಿ ಸೆಮಿಫೈನಲ್ ಹಂತಕ್ಕೆ ಬಂದಿದ್ದು ಕಡಿಮೆ. ಆದರೆ ಬಂದಾಗಲೆಲ್ಲಾ ಯಶಸ್ಸೂ ಗಳಿಸಿದೆ. ತಂಡದಲ್ಲಿ ಈ ಬಾರಿ ರಚಿನ್ ರವೀಂದ್ರ ಎಂಬ ಹೊಸ ಅಸ್ತ್ರವಿದೆ. ಆದರೆ ವಾಂಖೆಡೆ ಮೈದಾನದಲ್ಲಿ ಕಿವೀಸ್ ಗೆ ಸ್ಪಿನ್ ಸವಾಲು ಎದುರಾಗಬಹುದು. ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ ಕಂಡ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕ ನ್ಯೂಜಿಲೆಂಡ್ ಗಿದೆ. ಅತ್ತ ಭಾರತಕ್ಕೆ 2019 ರ ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಳ‍್ಳುವ ತವಕವಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇದು ಸೇಡಿನ ಪಂದ್ಯವಾಗಲಿದೆ. ಭಾರತೀಯ ಕಾಲಮಾನ ಪ್ರಕಾರ ಮಧ‍್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.