ಬೆಂಗಳೂರು: ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿನ್ನೆ ಗೂಡ್ಸ್ ಚಾಲಕನೊಬ್ಬ ನಮ್ಮ ದೇಶದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಕಾರಿಗೆ ಢಿಕ್ಕಿ ಹೊಡೆದು ವಾಗ್ವಾದ ನಡೆಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಗೂಡ್ಸ್ ಚಾಲಕನಿಗೆ ಎಚ್ಚರಿಕೆ ನೀಡಿದ್ದಾರೆ.
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಟ್ರಾಫಿಕ್ ಜ್ಯಾಮ್ ನಲ್ಲಿ ಸಿಲುಕಿದ್ದಾಗ ದ್ರಾವಿಡ್ ಕಾರಿಗೆ ಹಿಂದಿನಿಂದ ಬಂದಿದ್ದ ಗೂಡ್ಸ್ ಚಾಲಕ ಢಿಕ್ಕಿ ಹೊಡೆದಿದ್ದ. ಇದರಿಂದ ಕೋಪಗೊಂಡ ರಾಹುಲ್ ಕಾರಿನಿಂದ ಇಳಿದು ಗೂಡ್ಸ್ ಚಾಲಕನ ಜೊತೆ ವಾಗ್ವಾದಕ್ಕಿಳಿದಿದ್ದರು.
ತನ್ನ ತಪ್ಪಿದ್ದರೂ ಗೂಡ್ಸ್ ಚಾಲಕ ದ್ರಾವಿಡ್ ಎನ್ನುವುದನ್ನೂ ನೋಡದೇ ಕಿತ್ತಾಡುತ್ತಿದ್ದ. ಇದು ದ್ರಾವಿಡ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರಿನಲ್ಲಿ ಎಲ್ಲರಿಗೂ ಒಂದೇ ರೂಲ್ಸ್ ಆದರೆ ಗೂಡ್ಸ್ ಆಟೋ ಚಾಲಕರಿಗೆ ತಮ್ಮದೇ ಒಂದು ರೂಲ್ಸ್ ಎಂಬ ಭಾವನೆಯಲ್ಲಿರುತ್ತಾರೆ. ಎಲ್ಲೆಂದರಲ್ಲಿ ನುಗ್ಗಿಸಿ ಆಕ್ಸಿಡೆಂಟ್ ಮಾಡುವುದು, ಕೊನೆಗೆ ನಾವು ಬಡವರು ಎಂದು ಸಿಂಪತಿ ಗಿಟ್ಟಿಸಿಕೊಳ್ಳುವುದು ಅಭ್ಯಾಸವಾಗಿದೆ ಎಂದು ಕಿಡಿ ಕಾರಿದ್ದಾರೆ.
ಇನ್ನು ಕೆಲವರು, ಅವರು ಯಾರು ಎಂದು ತಿಳಿದ ಮೇಲೂ ಈ ಗೂಡ್ಸ್ ಚಾಲಕ ವಾಗ್ವಾದ ನಡೆಸುತ್ತಾನೆಂದರೆ ಏನು ಹೇಳಬೇಕು? ನಾವಾಗಿದ್ದರೆ ಒಂದು ಸೆಲ್ಫೀ ತೆಗೆದು ಕಳುಹಿಸುತ್ತಿದ್ದೆವು ಎಂದಿದ್ದಾರೆ. ಇನ್ನು, ಕೆಲವರು ಅವರು ಯಾರು, ಅವರು ನಮ್ಮ ದೇಶಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ನೋಡಿಕೊಂಡು ಮಾತನಾಡು. ಎಲ್ಲಾದ್ರೂ ದ್ರಾವಿಡ್ ಮೇಲೆ ಕೇಸ್ ಹಾಕಿ ಗಲಾಟೆ ಏನಾದ್ರೂ ಮಾಡಿದ್ಯೋ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.