ಬಾರ್ಬಡೋಸ್: ಟಿ20 ವಿಶ್ವಕಪ್ 2024 ಟೂರ್ನಿ ರಾಹುಲ್ ದ್ರಾವಿಡ್ ಪಾಲಿಗೆ ಭಾರತ ತಂಡದ ಕೋಚ್ ಆಗಿ ಕೊನೆಯ ಟೂರ್ನಿಯಾಗಿತ್ತು. ಈ ಫೈನಲ್ ಗೆಲುವಿನೊಂದಿಗೆ ದ್ರಾವಿಡ್ ಕೂಡಾ ಕೋಚ್ ಆಗಿ ನಿವೃತ್ತಿ ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಡ್ರೆಸ್ಸಿಂಗ್ ರೂಂನಲ್ಲಿ ಮಾಡಿದ ವಿದಾಯ ಭಾಷಣವನ್ನು ಬಿಸಿಸಿಐ ಪ್ರಕಟಿಸಿದೆ.
ಟಿ20 ವಿಶ್ವಕಪ್ ಫೈನಲ್ ಗೆಲುವಿನ ಬಳಿಕ ದ್ರಾವಿಡ್ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲಾ ಆಟಗಾರರು, ಸಿಬ್ಬಂದಿಗಳು ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದೆ ವಿದಾಯ ಭಾಷಣ ಮಾಡಿದ್ದಾರೆ. ಈ ಭಾಷಣವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದೆ. ಈ ಭಾಷಣದಲ್ಲಿ ದ್ರಾವಿಡ್ ವಿಶೇಷವಾಗಿ ರೋಹಿತ್ ಶರ್ಮಾಗೆ ಧನ್ಯವಾದ ಸಲ್ಲಿಸಿದ್ದಾರೆ.
ನಾನು ನಿಜಕ್ಕೂ ಇದನ್ನು ಶಬ್ಧಗಳನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಸುಂದರ ಕ್ಷಣಗಳಲ್ಲಿ ನನ್ನನ್ನೂ ಪಾಲುದಾರನನ್ನಾಗಿ ಮಾಡಿದ್ದಕ್ಕೆ ಪ್ರತಿಯೊಬ್ಬರಿಗೂ ಧನ್ಯವಾದಗಳು. ಪ್ರತಿಯೊಬ್ಬರೂ ಈ ಕ್ಷಣವನ್ನು ತಮ್ಮ ಕೊನೆಯವರೆಗೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ನೀವು ವೃತ್ತಿ ಜೀವನದಲ್ಲಿ ಎಷ್ಟು ವಿಕೆಟ್, ಎಷ್ಟು ರನ್ ಗಳಿಸಿದ್ದೀರಿ ಎಂದಲ್ಲ, ಇಂತಹ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ನಾನು ನಿಮ್ಮ ಬಗ್ಗೆ ನಿಜಕ್ಕೂ ಹೆಮ್ಮೆ ಪಡುತ್ತೇನೆ. ನೀವು ಕಮ್ ಬ್ಯಾಕ್ ಮಾಡಿದ ರೀತಿ, ಕೆಲಸ ಮಾಡಿದ ರೀತಿ, ಕಳೆದ ಕೆಲವು ಸಮಯದಿಂದ ಫೈನಲ್ ತನಕ ಬಂದು ಸಾಧನೆ ಮಾಡಲಾಗದೇ ನಿರಾಸೆ ಅನುಭವಿಸಿದ್ದು ಎಲ್ಲವನ್ನೂ ಬದಿಗೊತ್ತಿ ಇಂದು ನೀವೆಲ್ಲಾ ಮಾಡಿರುವ ಸಾಧನೆ ನಿಜಕ್ಕೂ ಅದ್ಭುತ. ಸಹಾಯಕ ಸಿಬ್ಬಂದಿ, ಆಟಗಾರರು ಮಾಡಿರುವ ಶ್ರಮ, ತ್ಯಾಗಕ್ಕೆ ಇಡೀ ದೇಶವೇ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ. ನಿಮ್ಮ ಕುಟುಂಬ ಇಲ್ಲಿ ಬಂದು ಈವತ್ತು ನಿಮ್ಮ ಸಾಧನೆಯನ್ನು ಕಣ್ಣಾರೆ ನೋಡಿದೆ. ನಿಮಗಾಗಿ ಅವರು ಸಾಕಷ್ಟು ತ್ಯಾಗ ಮಾಡಿದ್ದಾರೆ.
ಇದುವರೆಗೆ ನನಗೆ, ನನ್ನ ಸಹ ಸಿಬ್ಬಂದಿಗೆ ತೋರಿದ ಗೌರವ, ಪ್ರೀತಿ, ಬೆಂಬಲಕ್ಕೆ ದನ್ಯವಾದ ಹೇಳಲು ಬಯಸುತ್ತೇನೆ. ರೋ (ರೋಹಿತ್) ನನಗೆ ನೆನಪಿದೆ, ನೀವು ಕರೆ ಮಾಡಿ ಮುಂದುವರಿಯಲು ಹೇಳಿದ್ದಿರಿ. ಧನ್ಯವಾದಗಳು ನಿಮಗೆ. ನಾಯಕನಾಗಿ ನಿಮ್ಮ ಜೊತೆ ಸಾಕಷ್ಟು ಸಮಯ ಕಳೆದಿದ್ದೇನೆ, ಹಲವು ವಿಚಾರಗಳನ್ನು ಚರ್ಚಿಸಿದ್ದೇವೆ. ನಿಮ್ಮಲ್ಲಿ ಒಬ್ಬರಾಗಿ ನಿಮ್ಮೆಲ್ಲರ ಬಗ್ಗೆ ತಿಳಿಯಲು ನನಗೆ ಅವಕಾಶ ಸಿಕ್ಕಿದೆ. ಈ ಗೆಲುವು ಎಲ್ಲರ ಪರಿಶ್ರಮದ ಫಲ. ಈ ಕ್ಷಣವನ್ನು ಎಂಜಾಯ್ ಮಾಡೋಣ. ಹಾಗೆಯೇ ಒಂದು ಟೀಂ ಯಶಸ್ವಿಯಾಗಲು ಒಂದು ಸಂಸ್ಥೆಯ ಬೆಂಬಲ ಬೇಕು. ನಮಗೆ ಸದಾ ಬೆನ್ನುಲುಬಾಗಿರುವ ಬಿಸಿಸಿಐಗೆ ಧನ್ಯವಾದಗಳು ಎಂದು ದ್ರಾವಿಡ್ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.