ಬಾರ್ಬಡೋಸ್: ಟಿ20 ವಿಶ್ವಕಪ್ 2024 ರ ಫೈನಲ್ ಗೆದ್ದ ಸಂಭ್ರಮವನ್ನು ಟೀಂ ಇಂಡಿಯಾ ಆಟಗಾರರು ತಮ್ಮದೇ ರೀತಿಯಲ್ಲಿ ಆಚರಿಸಿಕೊಂಡು ಖುಷಿಪಟ್ಟಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಪತಿ ಜೊತೆಗೆ ಸಂಭ್ರಮಾಚರಿಸಿದ್ದು ಹೇಗೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಖುಷಿಯಲ್ಲಿ ಕಪ್ ಜೊತೆಗೇ ರಾತ್ರಿ ಮಲಗಿ ನಿದ್ರೆ ಮಾಡಿದ್ದರು. ಬೆಳಿಗ್ಗೆ ಕಪ್ ಮುಖ ನೋಡಿಕೊಂಡೇ ಎದ್ದಿದ್ದಾಗಿ ರೋಹಿತ್ ಫೋಟೋ ಹಂಚಿಕೊಂಡಿದ್ದರು. ಇನ್ನು, ಸೂರ್ಯಕುಮಾರ್ ಯಾದವ್ ಕೂಡಾ ಪತ್ನಿ ಜೊತೆ ಮಧ್ಯದಲ್ಲಿ ಕಪ್ ಇಟ್ಟು ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದರು.
ಆದರೆ ವೇಗಿ ಜಸ್ಪ್ರೀತ್ ಬುಮ್ರಾ ಮಾತ್ರ ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಪತ್ನಿ ಸಂಜನಾ ಗಣೇಶನ್. ಎಲ್ಲರಿಗೂ ಗೊತ್ತಿರುವ ಹಾಗೆ ಸಂಜನಾ ಕ್ರೀಡಾ ನಿರೂಪಕಿಯಾಗಿದ್ದು, ಈ ಬಾರಿ ಅವರೂ ವಿಶ್ವಕಪ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ವಿಶ್ವಕಪ್ ಗೆದ್ದ ಮರುದಿನವೇ ತನ್ನ ಪತಿ ಬುಮ್ರಾಗೆ ಐಸ್ ಕ್ರೀಂ ಪಾರ್ಟಿ ಕೊಡಿಸಿದ್ದಾರಂತೆ ಸಂಜನಾ. ಬುಮ್ರಾರನ್ನು ಕರೆದುಕೊಂಡು ಐಸ್ ಕ್ರೀಂ ತಿನ್ನಲು ಹೋಗುವ ಕ್ಷಣವನ್ನು ಹಂಚಿಕೊಂಡ ಸಂಜನಾ ವಿಶ್ವ ಚಾಂಪಿಯನ್ ಜೊತೆಗೆ ಬೆಳ್ಳಂ ಬೆಳಿಗ್ಗೆಯೇ ಐಸ್ ಕ್ರೀಂ ತಿನ್ನುವ ಖುಷಿ ಎಂದು ಬರೆದುಕೊಂಡಿದ್ದಾರೆ.