ಟಿ20 ವಿಶ್ವಕಪ್: ಬಾಂಗ್ಲಾ ಇನಿಂಗ್ಸ್ ವೇಳೆ ಮಳೆ, ಭಾರತಕ್ಕೆ ಈಗ ಸಂಕಷ್ಟ

ಬುಧವಾರ, 2 ನವೆಂಬರ್ 2022 (16:24 IST)
Photo Courtesy: Twitter
ಅಡಿಲೇಡ್: ಭಾರತ-ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಎರಡನೇ ಇನಿಂಗ್ಸ್ ವೇಳೆ ಮಳೆ ಕಾಣಿಸಿಕೊಂಡಿದೆ. ಇದರಿಂದಾಗಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.
 

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೆಎಲ್ ರಾಹುಲ್ (50), ವಿರಾಟ್ ಕೊಹ್ಲಿ (64) ಅರ್ಧಶತಕಗಳ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಅಂತೂ ರಾಹುಲ್ ಫಾರ್ಮ್ ಗೆ ಬಂದಿದ್ದು ಎಲ್ಲರಿಗೂ ಸಮಾಧಾನ ತಂದಿತ್ತು. ಆದರೆ ರೋಹಿತ್ ಶರ್ಮಾ ಕೇವಲ 2 ರನ್ ಗಳಿಗೆ ಔಟಾಗಿದ್ದರಿಂದ ಮತ್ತೆ ಭಾರತಕ್ಕೆ ಆರಂಭಿಕ ಜೋಡಿಯಿಂದ ಉತ್ತಮ ಜೊತೆಯಾಟದ ಭಾಗ್ಯವಿರಲಿಲ್ಲ. ಕೊಹ್ಲಿ ಎಂದಿನಂತೆ ಬ್ಯಾಟಿಂಗ್ ಆಧಾರ ಸ್ತಂಬವಾದರು. ಸೂರ್ಯ  ಬಿರುಸಿನ 30 ರನ್ ಗಳಿಸಿ ಔಟಾದರು.

ಆದರೆ ಬಾಂಗ್ಲಾದೇಶ ಯಾರೂ ಊಹಿಸಿರದ ರೀತಿಯಲ್ಲಿ ಬಿರುಸಿನ ಆರಂಭ ಪಡೆದಿದೆ. ಭಾರತೀಯ ಬೌಲರ್ ಗಳನ್ನು ಮನಬಂದಂತೆ ದಂಡಿಸಿರುವ ಲಿಟನ್ ದಾಸ್ ಕೇವಲ 26 ಎಸೆತಗಳಿಂದ 59 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೊಂದೆಡೆ ನಜ್ಮುಲ್ ಹುಸೈನ್ 7 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಒಟ್ಟಾರೆ 7 ಓವರ್ ಗಳ ಆಟ ನಡೆದಿದ್ದು, ಬಳಿಕ ಮಳೆ ಸುರಿಯಿತು.

ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿ ಡಕ್ ವರ್ತ್ ಲೂಯಿಸ್ ನಿಯಮ ಅನ್ವಯವಾದರೆ ನಷ್ಟವಾಗುವುದು ಭಾರತಕ್ಕೇ. ಮೊದಲ 5 ಓವರ್ ಗಳನ್ನು ಪರಿಗಣಿಸಿದರೆ ಬಾಂಗ್ಲಾ 17  ರನ್ ಮುನ್ನಡೆಯಲ್ಲಿದೆ. ಹೀಗಾಗಿ ಸುಲಭವಾಗಿ ಗೆಲ್ಲಬಹುದು. ಇನ್ನು, ಓವರ್ ಕಡಿತವಾದರೆ ಹೊಸದಾಗಿ ಎಷ್ಟು ರನ್ ಟಾರ್ಗೆಟ್ ಇರಬಹುದು ಎಂಬ ಕುತೂಹಲವಿದೆ. ಹಾಗಿದ್ದರೂ ಬಾಂಗ್ಲಾ ವಿಕೆಟ್ ನಷ್ಟವಿಲ್ಲದೇ 50 ಪ್ಲಸ್ ರನ್ ಗಳಿಸಿರುವುದು ಆ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ