ಖಾಸಗಿ ರೂಂ ವಿಡಿಯೋ ಶೇರ್ ಮಾಡಿದ್ದಕ್ಕೆ ವಿರಾಟ್ ಕೊಹ್ಲಿ ಗರಂ!
ಟಿ20 ವಿಶ್ವಕಪ್ ಆಡಲು ಪರ್ತ್ ಹೋಟೆಲ್ ನಲ್ಲಿ ನೆಲೆಸಿರುವ ಕೊಹ್ಲಿ ಕೊಠಡಿಯನ್ನು ಯಾರೋ ಹೋಟೆಲ್ ಸಿಬ್ಬಂದಿಗಳೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ಕೊಹ್ಲಿ ಗಮನಕ್ಕೆ ಬಂದಿದ್ದು, ವಿಡಿಯೋ ಶೇರ್ ಮಾಡಿರುವ ಕೊಹ್ಲಿ ನಾವು ಮನರಂಜನೆಯ ವಸ್ತುಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳಿಗೆ ನಮ್ಮನ್ನು ಭೇಟಿ ಮಾಡುವುದು, ನಮ್ಮ ಬಗ್ಗೆ ತಿಳಿದುಕೊಳ್ಳಲು ಖುಷಿಯಿರುತ್ತದೆ ಎಂಬುದು ನನಗೆ ಗೊತ್ತು. ಆದರೆ ಈ ವಿಡಿಯೋ ಎಲ್ಲೆ ಮೀರಿದೆ. ಇದು ನನ್ನ ಖಾಸಗಿತನಕ್ಕೆ ಧಕ್ಕೆ ಎನಿಸುತ್ತಿದೆ. ನನ್ನ ಹೋಟೆಲ್ ರೂಂನಲ್ಲೇ ನನಗೆ ಪ್ರೈವೆಸಿ ಇಲ್ಲ ಎಂದಾದರೆ ಬೇರೆ ಎಲ್ಲಿ ನಾನು ನಿರೀಕ್ಷಿಸಬೇಕು? ಇಂತಹ ಮಿತಿ ಮೀರಿದ ಅಭಿಮಾನ ನನಗೆ ಖಂಡಿತಾ ಇಷ್ಟವಿಲ್ಲ. ಜನರ ಖಾಸಗಿತನವನ್ನು ಗೌರವಿಸಿ ಮತ್ತು ಅವರನ್ನು ಮನರಂಜನೆಯ ವಸ್ತುಗಳಾಗಿ ಟ್ರೀಟ್ ಮಾಡಬೇಡಿ ಎಂದು ಕೊಹ್ಲಿ ಗರಂ ಆಗಿ ಹೇಳಿದ್ದಾರೆ.