ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಸರಣಿಯೇ ಕೊನೆಯಾಗುತ್ತಾ ಎಂಬಿತ್ಯಾದಿ ಅವರ ನಿವೃತ್ತಿ ಬಗ್ಗೆಯೇ ಹಲವು ವದಂತಿ ಹರಿದಾಡುತ್ತಿದೆ. ಆದರೆ ತಾವು ಯಾವಾಗ ನಿವೃತ್ತಿಯಾಗುವುದೆಂದು ಅವರು ಮೊದಲೇ ಹೇಳಿದ್ದರು.
ಸಚಿನ್ ತೆಂಡುಲ್ಕರ್ ನಂತರ ಭಾರತೀಯ ಕ್ರಿಕೆಟ್ ಪ್ರೇಮಿಗಳು ಅತ್ಯಂತ ಹೆಚ್ಚು ಆರಾಧಿಸಿದ ಆಟಗಾರ ಎಂದರೆ ವಿರಾಟ್ ಕೊಹ್ಲಿ. ಅವರು ಇದೀಗ ತಮ್ಮ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಕೆಲವರ ಪ್ರಕಾರ ಅವರು 2027 ರ ವಿಶ್ವಕಪ್ ಆಡುವುದೂ ಅನುಮಾನ ಎನ್ನಲಾಗುತ್ತಿದೆ.
ಈಗಾಗಲೇ ಅವರು ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದು, ಸದ್ಯಕ್ಕೆ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಈ ಮಾದರಿಗೂ ಅವರು ಸದ್ಯದಲ್ಲೇ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಅವರ ಹಳೆಯ ಸಂದರ್ಶನವೊಂದರ ಮಾತುಗಳು ನೆನಪಾಗುತ್ತಿದೆ.
ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿಯಾಗುತ್ತೇನೆಂದು ಹೇಳಿದ್ದರು. ನನಗೆ ಯಾವಾಗ ತಂಡಕ್ಕಾಗಿ ಏನೂ ಕೊಡುಗೆ ಕೊಡಲು ಸಾಧ್ಯವಿಲ್ಲ ಎನಿಸುತ್ತದೋ ಆವತ್ತು ನಾನು ಆಡುವುದನ್ನುನಿಲ್ಲಿಸುತ್ತೇನೆ. ನನ್ನ ದೇಹ ಸಹಕರಿಸುವುದಿಲ್ಲ ಎನಿಸುವಾಗ ಮತ್ತು ಮೈದಾನದಲ್ಲಿ ನಿಂತು ನನ್ನ ಅಗತ್ಯ ಇಲ್ಲಿಲ್ಲ ಎನಿಸಿದಾಗ ನಾನು ನಿವೃತ್ತಿಯಾಗುತ್ತೇನೆ ಎಂದು ಕೊಹ್ಲಿ ಹೇಳಿದ್ದರು. ಆದರೆ ಮೊನ್ನೆ ಆಸ್ಟ್ರೇಲಿಯಾಕ್ಕೆ ಕಾಲಿಟ್ಟ ತಕ್ಷಣ ನೀವು ಯಾವಾಗ ಸೋಲು ಒಪ್ಪಿಕೊಳ್ಳುತ್ತೀರೋ ಆಗ ನೀವು ವಿಫಲರಾಗುತ್ತೀರಿ ಎಂದು ಟ್ವೀಟ್ ಮಾಡಿದ್ದರು. ಅವರ ಈ ಮಾತು ನೋಡಿದರೆ ಸದ್ಯಕ್ಕೆ ಅವರು ನಿವೃತ್ತಿಯಾಗಲ್ಲ ಎನ್ನಬಹುದು.