Ravindra Jadeja: ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಸೂಚನೆ ನೀಡಿದ ರವೀಂದ್ರ ಜಡೇಜಾ

Krishnaveni K

ಶನಿವಾರ, 11 ಜನವರಿ 2025 (10:19 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಫೋಟೋವೊಂದು ಅವರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತಿರುವುದರ ಸೂಚನೆ ಎನ್ನಲಾಗಿದೆ.

ಇದೀಗ ಟೀಂ ಇಂಡಿಯಾ ಹಿರಿಯರ ಕ್ರಿಕೆಟಿಗರು ಒಬ್ಬೊಬ್ಬರೇ ನಿವೃತ್ತಿಯಾಗಿ ಕಿರಿಯರಿಗೆ ದಾರಿ ಮಾಡಿಕೊಡುವ ಪರಿವರ್ತನೆಯ ಕಾಲ ನಡೆಯುತ್ತಿದೆ. ಇತ್ತೀಚೆಗಷ್ಟೇ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದರು. ಇದೀಗ ಜಡೇಜಾ ಸರದಿ.

ಒಂದು ಕಾಲದಲ್ಲಿ ಅಶ್ವಿನ್-ಜಡೇಜಾ ಸ್ಪಿನ್ ಜೋಡಿ ಟೆಸ್ಟ್ ಕ್ರಿಕೆಟ್ ನಲ್ಲಿ ಜೋಡೆತ್ತುಗಳಂತೆ ಭಾರತವನ್ನು ಹೆಗಲು ಕೊಟ್ಟು ಮುನ್ನಡೆಸುತ್ತಿತ್ತು. ಈ ಪೈಕಿ ಅಶ್ವಿನ್ ಎಂಬ ಜೋಡೆತ್ತು ತಮ್ಮ ಕೆಲಸ ಮುಗಿಸಿದ್ದಾರೆ. ಇದೀಗ ಜಡೇಜಾ ಸರದಿಯೆಂದು ತೋರುತ್ತಿದೆ.

ಜಡೇಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಟೆಸ್ಟ್ ಜೆರ್ಸಿಯ ಫೋಟೋವನ್ನು ಪ್ರಕಟಿಸಿದ್ದಾರೆ. ಇದನ್ನು ಗಮನಿಸಿದರೆ ಅವರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿಯಾಗುತ್ತಿರುವುದರ ಸೂಚನೆ ನೀಡಿದ್ದಾರೆಯೇ ಎಂಬ ಅನುಮಾನ ನೀಡಿದೆ. ಈಗಿನ ವರದಿ ಪ್ರಕಾರ ಚಾಂಪಿಯನ್ಸ್ ಟ್ರೋಫಿಯಲ್ಲೂ ಜಡೇಜಾಗೆ ಸ್ಥಾನ ಸಿಗುವುದು ಅನುಮಾನವಾಗಿದೆ. ಹೀಗಾಗಿ ಈ ವರ್ಷ ಕೆಲವು ಸೀಮಿತ ಓವರ್ ಗಳ ಪಂದ್ಯ ಆಡಿ ಬಳಿಕ ಎಲ್ಲಾ ಮಾದರಿಗೆ ನಿವೃತ್ತಿ ಹೇಳುವ ಸಾಧ್ಯತೆಯಿದೆ. ಜಡೇಜಾಗೆ ಈಗ 36 ವರ್ಷ. ಈಗಾಗಲೇ ಟಿ20 ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 80 ಪಂದ್ಯವಾಡಿರುವ ಜಡೇಜಾ 4 ಶತಕ, 22 ಅರ್ಧಶತಕ ಹಾಗೂ 323 ವಿಕೆಟ್ ಕಬಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ