ಕಿಕ್ಕಿರಿದು ಸೇರಿದ್ದ ಅಭಿಮಾನಿಗಳನ್ನು ನಿರಾಸೆಗೊಳಿಸಿದ ಆರ್‌ಸಿಬಿ: ತವರಿನಲ್ಲಿ ಮಂದಾನ ಪಡೆಗೆ ನಾಲ್ಕನೇ ಸೋಲು

Sampriya

ಭಾನುವಾರ, 2 ಮಾರ್ಚ್ 2025 (10:45 IST)
Photo Courtesy X
ಬೆಂಗಳೂರು: ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆಲುವಿನ ಸಂಭ್ರಮವನ್ನು ಸವಿಯಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ 30 ಸಾವಿರ ಮಂದಿ ಜಮಾಯಿಸಿದ್ದರು. ಆದರೆ, ತವರಿನಲ್ಲಿ ಸತತ ನಾಲ್ಕನೇ ಸೋಲು ಅನುಭವಿಸುವ ಮೂಲಕ ಸ್ಮೃತಿ ಮಂದಾನ ಪಡೆ ಮತ್ತೆ ನಿರಾಸೆಗೊಳಿಸಿತ್ತು.

ವಾರಾಂತ್ಯವಾಗಿದ್ದರಿಂದ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ತವರು ಲೆಗ್‌ನ ಮಹಿಳಾ ಪ್ರೀಮಿಯರ್‌ ಲೀಗ್‌ನ ಕೊನೆಯ ಪಂದ್ಯದಲ್ಲಾದರೂ ಆರ್‌ಸಿಬಿ ತಂಡ ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದರು. ಆರ್‌ಸಿಬಿ ಬ್ಯಾಟರ್‌ ಎಲಿಸ್‌ ಪೆರಿ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ಆಕರ್ಷಕ ಅರ್ಧಶತಕ ದಾಖಲಿಸಿ ಅಭಿಮಾನಿಗಳನ್ನು ರಂಜಿಸಿದರು.

ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ನಾಯಕಿ ಸ್ಮೃತಿ ಮಂದಾನ 8 ರನ್‌ಗೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆದರೆ, ಎಲಿಸ್‌ ಪೆರಿ ಅವರ ಅರ್ಧಶತಕದ ನೆರವಿನಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 147 ರನ್‌ ಗಳಿಸಿತ್ತು.

ಈ ಗುರಿಯನ್ನು ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 15.3 ಓವರ್‌ಗಳಲ್ಲಿ 1 ವಿಕೆಟ್‌ಗೆ 151 ರನ್‌ ಗಳಿಸಿ ಜಯಭೇರಿ ಬಾರಿಸಿತು. ಶೆಫಾಲಿ ವರ್ಮಾ ಔಟಾಗದೇ 80 ಮತ್ತು ಜೆಸ್‌ ಜೊನಾಸನ್‌ ಔಟಾಗದೇ 61 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಸೋಲಿನೊಂದಿಗೆ ಆರ್‌ಸಿಬಿ ತಂಡದ ಪ್ಲೇ ಆಫ್‌ ಕನಸು ಮತ್ತಷ್ಟು ಕಠಿಣವಾಗಿದೆ. ಆಡಿರುವ 6 ಪಂದ್ಯಗಳಲ್ಲಿ ಕೇವಲ ಎರಡನ್ನು ಗೆದ್ದಿರುವ ತಂಡವು 4 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಐದು ಗೆದ್ದ ಡೆಲ್ಲಿ ತಂಡ ಅಗ್ರಸ್ಥಾನದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ