ವಿಶ್ವಕಪ್ ಫೈನಲ್: ಅಂತಿಮ ಕದನಕ್ಕೆ ಮುನ್ನ ಶಾಂತ ರೋಹಿತ್

ಶನಿವಾರ, 18 ನವೆಂಬರ್ 2023 (21:00 IST)
ಅಹಮ್ಮದಾಬಾದ್: ಚಕ್ರವರ್ತಿಯಾಗಲು ಹೊರಟವನು ರಣಾಂಗಣದಲ್ಲಿ ಹೋರಾಡಲೇ ಬೇಕು. ಹೋರಾಟಕ್ಕೆ ಮುನ್ನ ಶಾಂತವಾಗಿ ಕುಳಿತು ಯೋಜನೆ ಹೆಣೆಯಬೇಕು. ಯೋಜನೆಗಳನ್ನು ಅಷ್ಟೇ ಕರಾರುವಾಕ್ ಆಗಿ ಜಾರಿಗೆ ತರಬೇಕು. ಇದಕ್ಕೆಲ್ಲಾ ತಾಳ್ಮೆ ಬೇಕೇ ಬೇಕು.

ಸದ್ಯಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಇದೇ ಪರಿಸ್ಥಿತಿಯಲ್ಲಿದ್ದಾರೆ. ಇಡೀ ವಿಶ್ವವೇ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂಬ ಭರವಸೆಯಲ್ಲಿದೆ. ಆ ಭರವಸೆಯನ್ನು ಹೊತ್ತು ಮೈದಾನದಲ್ಲಿ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಆಡುವುದು ಸುಲಭದ ಮಾತಲ್ಲ. ಇದಕ್ಕೆ ಶಾಂತ ಚಿತ್ತ ಅತ್ಯಗತ್ಯ. ಇಂದು ಮಾಧ‍್ಯಮಗಳನ್ನು ಎದುರಿಸುವಾಗ ರೋಹಿತ್ ಮಾತಿನಲ್ಲಿ ಈ ಶಾಂತತೆ ಕಂಡುಬಂದಿತ್ತು.

‘ಇದನ್ನು ಒಂದು ಫೈನಲ್ ಪಂದ್ಯವೆಂಬ ಒತ್ತಡದೊಂದಿಗೆ ಆಡಲು ಸಾಧ‍್ಯವಿಲ್ಲ. ಈ ಪಂದ್ಯದ ಬಗ್ಗೆ ನಾವು ಅತಿಯಾದ ಉತ್ಸಾಹ ಅಥವಾ ಅತಿಯಾದ ಒತ್ತಡವನ್ನು ಮೈಮೇಲೆಳೆದುಕೊಂಡಿಲ್ಲ. ಫೈನಲ್ ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದೇನೆ ಎಂಬುದೇ ನನಗೆ ಸಂತೋಷದ ವಿಷಯ. ನಾನು ಯಾವತ್ತೂ ಇದು ಸಾಧ‍್ಯವಾಗಬಹುದು ಅಂದುಕೊಂಡಿರಲಿಲ್ಲ.

ನಾನು ನಾಯಕನಾಗಿ ತಂಡಕ್ಕೆ ಬಂದಾಗಿನಿಂದ ಈ ಒಂದು ದಿನಕ್ಕಾಗಿ ತಯಾರಿ ನಡೆಯುತ್ತಲೇ ಇತ್ತು. ಇದೀಗ ಕೂಲ್ ಆಗಿ ಎಲ್ಲವನ್ನೂ ಸರಳವಾಗಿಸಿ ಆಡುವುದು ಮುಖ್ಯ. ಗೆದ್ದರೆ ತುಂಬಾ ಸಂತೋಷವಾಗುತ್ತದೆ. ನಾವು ಸಾಕಷ್ಟು ಕಠಿಣ ಪರಿಶ್ರಮಪಟ್ಟಿದ್ದೇವೆ. ಆದರೆ ಅತಿಯಾದ ಒತ್ತಡ, ಉತ್ಸಾಹ ಮೈಮೇಲೆಳೆದುಕೊಳ್ಳಲು ಇಷ್ಟಪಡಲ್ಲ.

ಕೆಲವೊಂದು ಭಾವನೆಗಳನ್ನು ಅಡಗಿಸಿಡಲು ಸಾಧ‍್ಯವಾಗದು. ಕ್ರೀಡೆಯ ಅಂದ ಇರುವುದೇ ಅಲ್ಲಿ. ನಾನು ನನ್ನ ಹುಡುಗರಿಗೆ ವಿಶೇಷವಾಗಿ ಹೇಳಬೇಕಿರುವುದು ಏನೂ ಇಲ್ಲ. ಎಲ್ಲರೂ ಅನುಭವಿಗಳೇ. ಹೆಚ್ಚಿನವರು ವಿಶ್ವಕಪ್ ಫೈನಲ್ ಆಡಿಲ್ಲ. ಆದರೆ ನಮ್ಮಲ್ಲಿ ಕೊಹ್ಲಿ, ಅಶ್ವಿನ್‍ ಫೈನಲ್ ಆಡಿದ ಅನುಭವಿಗಳಿದ್ದಾರೆ. ಜನ ಹಲವು ವಿಚಾರ ಹೇಳುತ್ತಿರಬಹುದು. 200 ರನ್ ಮಾಡಿ, ವಿಕೆಟ್ ತೆಗೆಯಬೇಕು ಇತ್ಯಾದಿ.. ನಮ್ಮ ಹುಡುಗರು ಹೊರಗಿನ ಮಾತುಗಳು, ಒತ್ತಡಗಳು ಕಿವಿಗೆ ಬೀಳದಂತೆ ಹೆಡ್ ಫೋನ್ ಹಾಕಿಕೊಂಡಿದ್ದಾರೆ. 2011 ರಲ್ಲಿ ಏನಾಗಿತ್ತು ಎಂದೆಲ್ಲಾ ಯೋಚನೆ ಮಾಡಿಕೊಂಡು ತುಂಬಾ ಭಾವುಕರಾಗಲು ಇಷ್ಟಪಡುವುದಿಲ್ಲ.  ಈ ವಿಶ್ವಕಪ್ ಆರಂಭದಲ್ಲಿ ಯಾವ ವಾತಾವರಣ ಸೃಷ್ಟಿ ಮಾಡಿದ್ದೆವೋ ಅದೇ ವಾತಾವರಣದಲ್ಲಿ ಶಾಂತ ಚಿತ್ತರಾಗಿ ಆಡಲು ಬಯಸುತ್ತೇವೆ. ಈ ತಂಡದಲ್ಲಿ ಎಲ್ಲರೂ ಹೋಗಿ ಯದ್ವಾ ತದ್ವಾ ರನ್ ಚಚ್ಚಿ ಬರುವುದಿಲ್ಲ. ಪ್ರತಿಯೊಬ್ಬರಿಗೂ ಅವರವರ ರೋಲ್ ಇದೆ. ಅದನ್ನು ಎಲ್ಲರೂ ನಿಭಾಯಿಸುತ್ತಾರೆ. ತಂಡಕ್ಕೆ ಯಾವ ರೀತಿ ಅಗತ್ಯವೋ ಆ ರೀತಿ ಆಡುತ್ತೇವೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ