ಗಾಯದಿಂದ ಪೆವಿಲಿಯನ್ ಸೇರಿದ ರೋಹಿತ್: ಟೀಂ ಇಂಡಿಯಾ ಸ್ಥಿತಿ ಶೋಚನೀಯ

ಬುಧವಾರ, 7 ಡಿಸೆಂಬರ್ 2022 (16:28 IST)
Photo Courtesy: Twitter
ಡಾಕಾ: ಬಾಂಗ್ಲಾದೇಶ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದು, ಭಾರತದ ಸ್ಥಿತಿ ಶೋಚನೀಯವಾಗಿದೆ.

ಬಾಂಗ್ಲಾದಂತಹ ದುರ್ಬಲ ತಂಡದ ಎದುರೂ ಟೀಂ ಇಂಡಿಯಾ ಘಟಾನುಘಟಿಗಳು ಪ್ರತಿರೋಧವೇ ತೋರದೇ ಶರಣಾಗುತ್ತಿರುವುದು ಶೋಚನೀಯ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 50 ಓವರ್ ಗಳಲ್ಲಿ 7  ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು. 6 ನೇ ವಿಕೆಟ್ ಗೆ ಮೆಹದಿ ಹಸನ್ ಮತ್ತು ಮೊಹಮ್ಮದುಲ್ಲಾ 100 ಪ್ಲಸ್ ರನ್ ಗಳ ಜೊತೆಯಾಟವಾಡಿದರು. ಅದರಲ್ಲೂ ಕಳೆದ ಪಂದ್ಯದಲ್ಲಿ ಬಾಂಗ್ಲಾಕ್ಕೆ ರೋಚಕ ಗೆಲುವು ಕೊಡಿಸಿದ್ದ ಮೆಹದಿ ಹಸನ್ ಈ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿ ಅಬ್ಬರಿಸಿದರು. ಮೊಹಮ್ಮದುಲ್ಲಾ 77 ರನ್ ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಐದು ಓವರ್ ಗಳಲ್ಲಿ ಬಾಂಗ್ಲಾ ರನ್ ಹೊಳೆ ಹರಿಸಿತು. ಯುವ ವೇಗಿ ಉಮ್ರಾನ್ ಮಲಿಕ್ (2 ವಿಕೆಟ್) ರನ್ನು ಮೆಹದಿ ವಿಶೇಷವಾಗಿ ಮನಬಂದಂತೆ ದಂಡಿಸಿದರು. ವಾಷಿಂಗ್ಟನ್ ಸುಂದರ್ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಲು ಹೊರಟ ಭಾರತಕ್ಕೆ ರೋಹಿತ್ ಗಾಯ ದೊಡ್ಡ ಆಘಾತ ನೀಡಿದೆ. ರೋಹಿತ್ ಅರ್ಧದಲ್ಲೇ ಮೈದಾನ ಬಿಟ್ಟು ತೆರಳಿದರು. ಎಕ್ಸ್ ರೇ ಮುಗಿಸಿ ಪೆವಿಲಿಯನ್ ಗೆ ಬಂದರೂ ಇದೀಗ ಚೇಸಿಂಗ್ ವೇಳೆ ಆರಂಭಿಕರಾಗಿ ಕಣಕ್ಕಿಳಿದಿಲ್ಲ. ಅವರ ಬದಲು ಆರಂಭಿಕರಾಗಿ ಬಂದ ವಿರಾಟ್ ಕೊಹ್ಲಿ ಕೇವಲ 5 ರನ್ ಗೆ ವಿಕೆಟ್ ಒಪ್ಪಿಸಿದರೆ ಶಿಖರ್ ಧವನ್ ರದ್ದು ಮತ್ತೊಂದು ಫ್ಲಾಪ್ ಶೋ. ಅವರು 8 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಭಾರತ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿ ದಯನೀಯ ಪರಿಸ್ಥಿತಿಯಲ್ಲಿದೆ. ಬಾಂಗ್ಲಾದಂತಹ ದುರ್ಬಲ ತಂಡದ ಎದುರೂ ಟೀಂ ಇಂಡಿಯಾದಂತಹ ದಿಗ್ಗಜ ತಂಡ ಪರದಾಡುತ್ತಿರುವುದು ನೋಡಿದರೆ ವಿಪರ್ಯಾಸವೆನಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ