ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಒಂದೂವರೆ ದಿನದಲ್ಲೇ ಮುಗಿದಿತ್ತು. ಈ ಬಗ್ಗೆ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ನೀಡಿದ್ದ ಹೇಳಿಕೆ ವೈರಲ್ ಆಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಪಿಚ್ ಬಗ್ಗೆ ರೋಹಿತ್ ಗೆ ಪ್ರಶ್ನೆ ಕೇಳಲಾಗಿತ್ತು. ಕೇವಲ ಒಂದೂವರೆ ದಿನದಲ್ಲಿ ಟೆಸ್ಟ್ ಪಂದ್ಯ ಮುಕ್ತಾಯವಾಗಿರುವುದರ ಬಗ್ಗೆ ಮತ್ತು ಪಿಚ್ ಕಂಡೀಷನ್ ಬಗ್ಗೆ ರೋಹಿತ್ ಮುಕ್ತವಾಗಿ ಮಾತನಾಡಿದ್ದಾರೆ.
ಒಂದು ವೇಳೆ ಭಾರತದಲ್ಲಿ ಸ್ಪಿನ್ ಪಿಚ್ ಮಾಡಿ ಮೊದಲ ದಿನವೇ ಈ ರೀತಿ ತಿರುವು ಪಡೆಯುತ್ತಿದ್ದರೆ ಪಿಚ್ ಸರಿ ಇಲ್ಲ ಎನ್ನುತ್ತಿದ್ದರು. ಏಕದಿನ ವಿಶ್ವಕಪ್ ಸೆಮಿಫೈನಲ್ ನಡೆದ ಪಿಚ್ ಗೆ ಕಳಪೆ ರೇಟಿಂಗ್ ಕೊಟ್ಟಿದ್ದೇಕೆ ಎನ್ನುವುದು ನನಗೆ ಈಗಲೂ ಅರ್ಥವಾಗಿಲ್ಲ. ಅಲ್ಲಿ ಒಂದು ಶತಕ ಕೂಡಾ ದಾಖಲಾಗಿತ್ತು. ಐಸಿಸಿ ಈ ನಿಟ್ಟಿನಲ್ಲಿ ಗಮನಹರಿಸಬೇಕು. ಯಾವ ದೇಶದ ಪಿಚ್ ಎಂದು ನೋಡುವ ಬದಲು ಎಂತಹ ಪಿಚ್ ಎಂದು ಪರಿಗಣಿಸಿ ರೇಟಿಂಗ್ ನೀಡಲಿ. ಸ್ಪಿನ್ ಪಿಚ್ ಆಗಿದ್ದರೆ ಸರಿ ಇಲ್ಲ, ವೇಗಿಗಳಿಗೆ ನೆರವಾಗುವ ಪಿಚ್ ಆದರೆ ಉತ್ತಮ ಪಿಚ್ ಎನ್ನುವ ಧೋರಣೆ ಬದಲಾಗಬೇಕು. ನಿಜ ಹೇಳಬೇಕೆಂದರೆ ನನಗೆ ಇಂತಹ ಪಿಚ್ ಬಗ್ಗೆ ಯಾವುದೇ ತಕರಾರು ಇಲ್ಲ. ನಾವು ಇಂತಹ ಪಿಚ್ ನಲ್ಲಿ ಆಡಲೂ ರೆಡಿಯಿದ್ದೇವೆ ಎಂದು ಭಾರತೀಯ ಪಿಚ್ ಬಗ್ಗೆ ಟೀಕೆ ಮಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ.
ಭಾರತದಲ್ಲಿ ಈ ರೀತಿ ಎರಡು ಅಥವಾ ಮೂರು ದಿನದಲ್ಲಿ ಟೆಸ್ಟ್ ಪಂದ್ಯ ಮುಕ್ತಾಯವಾದಾಗ ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದು ಇದೆ. ಐಸಿಸಿ ಕೂಡಾ ಕಳಪೆ ಎಂದು ಪಿಚ್ ಗೆ ರೇಟಿಂಗ್ ಕೊಟ್ಟ ದೃಷ್ಟಾಂತವಿದೆ. ಆದರೆ ವಿದೇಶಗಳಲ್ಲಿ ವೇಗದ ಪಿಚ್ ನಿರ್ಮಿಸಿ ಎರಡೇ ದಿನದೊಳಗೆ ಪಂದ್ಯ ಮುಕ್ತಾಯವಾದರೂ ಯಾರೂ ಚಕಾರವೆತ್ತುವುದಿಲ್ಲ ಎನ್ನುವುದು ವಿಶೇಷ!